ಹುಬ್ಬಳ್ಳಿ ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಉದ್ಯಾನವನವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಸರಿಯಾದ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರ ಪರದಾಟ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿಗೆ ವೃದ್ಧರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ದಿನಂಪ್ರತಿ ನೂರಾರು ಮಂದಿ ಬರುತ್ತಾರೆ.
“ಇಂದಿರಾ ಗಾಜಿನ ಮನೆಗೆ ಪ್ರವೇಶವಾಗುತ್ತಿದ್ದಂತೆಯೇ ಜನರು ಗಲೀಜು ನೀರಿನ ದರ್ಶನ ಮಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಗಾಜಿನ ಮನೆ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದೆ. ಮಕ್ಕಳ ಆಟದ ಮೈದಾನದಲ್ಲಿಯೇ ಕಸದ ತಿಪ್ಪೆಗಳು ಗುಡ್ಡದಂತೆ ಬಿದ್ದಿದ್ದು, ಅದನ್ನು ಸ್ವಚ್ಛಗೊಳಿಸುವವರಿಲ್ಲ. ಗಾಜಿನ ಮನೆಯ ಒಳಾಂಗಣದ ಸುತ್ತಲೂ ಎಲ್ಲೆಂದರಲ್ಲಿ ಕಸ, ಕಾಲಿಟ್ಟರೆ ಜಾರುವಂತಿರುವ ರಜ್ಜು ಪ್ರವಾಸಿಗರಿಗೆ ಬೇಸರವನ್ನುಂಟುಮಾಡಿದೆ. ಒಂದಿಷ್ಟು ಊಟ ಕಟ್ಟಿಕೊಂಡು ಬಂದು ನೆಮ್ಮದಿಯಿಂದ ಕುಳಿತು ಊಟ ಮಾಡಬೇಕೆಂದರೆ ಸೊಳ್ಳೆಗಳ ಕಾಟ, ಗಲೀಜು ಬೆನ್ನು ಬಿಡದೆ ಕಾಡುತ್ತದೆ” ಎನ್ನುತ್ತಾರೆ ಸಾರ್ವಜನಿಕರು.
ಈ ಕುರಿತು ಈ ದಿನ.ಕಾಮ್ ಜೊತೆಗೆ ಮಾಹಿತಿ ಹಕ್ಕು ಕಾರ್ಯಕರ್ತ ಹುಸೇನ್ ಭಾಷಾ ತಳೆವಾಡ ಮಾತನಾಡಿ, “ಇಂದಿರಾ ಗ್ಲಾಸ್ ಹೌಸ್‌ನಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ ನಿರ್ವಹಣೆ ಕೊರತೆ ಮತ್ತು ನೀರಿನ ವ್ಯವಸ್ಥೆ ಇಲ್ಲದೆ ದುರ್ನಾಥ ಹೊಡೆಯುತ್ತಿವೆ. ಇನ್ನು ಕುಡಿಯುವ ನೀರಿನ ಬಗ್ಗೆಯಂತೂ ಕೇಳುವುದೇ ಬೇಡ. ಸಾರ್ವಜನಿಕರಿಗೆ ಉಪಯೋಗವಾಗದ ಶಾಚಾಲಯ ಕಟ್ಟಿಸಿದ್ದು ಯಾವ ಪುರುಷಾರ್ಥಕ್ಕಾಗಿ? ಇನ್ನು ಪುಟಾಣಿ ರೈಲು ಉದ್ಘಾಟನೆಗೊಂಡ ದಿನವೇ ಮುರಿದು ಬಿದ್ದಿದ್ದು, ಈವರೆಗೂ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ” ಎಂದು ದೂರಿದರು.

“ಬಸವಣ್ಣನವರ ಪುತ್ಥಳಿಯ ಸುತ್ತಲೂ ನಾಲ್ಕೈದು ಅಡಿ ಕಸ ಬೆಳೆದಿದ್ದು, ಈವರೆಗೂ ಸ್ವಚ್ಛಗೊಳಿಸಿಲ್ಲ. ಇದು ಬಸವಣ್ಣನವರಿಗೆ ಮಾಡುವ ಅವಮಾನವಲ್ಲವೇ?. ಒಟ್ಟಾರೆಯಾಗಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿಕೊಂಡು ಒಂದು ಸಾವಿರ ಕೋಟಿ ರೂಪಾಯಿಗಳ ಹಗರಣವನ್ನು ಮಾಡಿದ್ದು, ಅದರಲ್ಲಿ 50 ಪ್ರತಿಶತವಾದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ” ಎಂದು ಆರೋಪಿಸಿದರು.
ಪೂಜಾ ಎಂಬುವವರು ಮಾತನಾಡಿ, “ಶಹರದ ಮಧ್ಯೆ ಇಂತಹ ಒಂದು ಪ್ರೇಕ್ಷಣೀಯ ಸ್ಥಳ ನಿರ್ಮಾಣವಾಗಿರುವುದು ಬಹಳಷ್ಟು ಖುಷಿಯ ವಿಚಾರ. ಆದರೆ ಇಲ್ಲಿ ಬಂದು ನೋಡಿದಾಗ ಬಹಳಷ್ಟು ಅವ್ಯವಸ್ಥೆಯಿಂದ ನಿರ್ಮಾಣವಾಗಿದೆ. ಇನ್ನಷ್ಟು ಡೆವಲಪ್‌ಮೆಂಟ್ ಮಾಡಿದರೆ ಪ್ರವಾಸಿಗರಿಗೆ ಅನುಕೂಲವಿರುತ್ತದೆ” ಎಂದು ಹೇಳಿದರು.
“ಗಾಜಿನ ಮನೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಹಲವು ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ಇಲ್ಲಿ ತುಂಬಾ ಕೊಳಚೆ ನಿರ್ಮಾಣವಾಗಿದ್ದು, ಶೌಚಾಲಯವಿದ್ದರೂ ನೀರಿಲ್ಲದಿರುವುದು ಕಂಡುಬರುತ್ತದೆ. ಅಲ್ಲದೆ ಎಲ್ಲೆಂದರಲ್ಲಿ ಎದೆಯೆತ್ತರಕ್ಕೆ ಕಸ ಬೆಳದಿದೆ. ಕೊಳಚೆ ನೀರು ನಿಂತು ರಜ್ಜಾಗಿದೆ. ಇದರಿಂದ ಜನರ ಮೇಲೆ ಅನೇಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಬೇಕಿದ್ದರೆ ಪ್ರವೇಶದರ ಹೆಚ್ಚಿಸಿ ಸರಿಯಾಗಿ ಅಭಿವೃದ್ಧಿ ಮಾಡಲಿ. ಗಾಜಿನ ಮನೆ ಮತ್ತು ಉದ್ಯಾನವನದಲ್ಲಿ ಬಹಳ ಅಭಿವೃದ್ಧಿ ಕಾಣಬೇಕಿದೆ. ನಿರ್ಹವಣೆ ಅತ್ಯಂತ ಕೆಳಮಟ್ಟದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಅಭಿವೃದ್ಧಿಗೊಳಿಸಿದರೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲವಾಗುತ್ತದೆ” ಎನ್ನುತ್ತಾರೆ ಅಶೋಕ.

ಈ ವರದಿ ಓದಿದ್ದೀರಾ? ಧಾರವಾಡ | ಮೂಲಭೂತ ಸಮಸ್ಯೆಗಳಿಂದ ಕೊರಗುತ್ತಿದೆ ಹೊನ್ನಾಪುರ ಗ್ರಾಮ: ಕಣ್ಣು ತೆರೆಯಲಿದೆಯೇ ಸರ್ಕಾರ?
ಪ್ರವಾಸಿಗರಿಗೆ, ಅವಳಿ ನಗರದ ನಿವಾಸಿಗಳಿಗೆ ವೈವಿಧ್ಯಮಯ ತಾಣವಾಗಬೇಕಿದ್ದ ಇಂದಿರಾ ಗಾಜಿನ ಮನೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವರೆ? ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವರೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.