- ʼಹುಬ್ಬಳ್ಳಿಯಲ್ಲಿ ಕನ್ನಡಪರ ಹೋರಾಟಗಾರರು ಗಾಢನಿದ್ರೆಯಲ್ಲಿದ್ದಾರೆʼ
- ಭಾರತವು ಒಕ್ಕೂಟ ವ್ಯವಸ್ಥೆಯುಳ್ಳ ಜಾತ್ಯತೀತ ದೇಶ
ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂದು ಕನ್ನಡ ಉಳಿಸುವ-ಬೆಳೆಸುವ ಮಾತುಗಳು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ, ಹೂವು ಬಳ್ಳಿಗಳ ನಗರ, ವಿಶ್ವದ ಅತಿ ಉದ್ದನೆಯ ಪ್ಲಾಟ್ ಫಾರಂ ಹೊಂದಿರುವ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ನೊಂದಿಗೆ ಹಿಂದಿಯಲ್ಲಿ ‘ನಯಾ ಭಾರತ್’ ಮತ್ತು ಆಂಗ್ಲದಲ್ಲಿ ‘ನ್ಯೂ ಇಂಡಿಯಾ’ ನಾಮಾಂಕಿತ ಹೊಂದಿರುವ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ಕಟೌಟ್ ನಿಲ್ಲಿಸಿದ್ದು ತಪ್ಪೆಂದು ಹೇಳುತ್ತಿಲ್ಲ ಆದರೆ, ಆ ಕಟೌಟ್‌ಗಳಲ್ಲಿ ಒಂದೇ ಒಂದು ಕನ್ನಡ ಪದವಿಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.
“ಹಿಂದಿ, ಇಂಗ್ಲಿಷ್ ಹೇರಿಕೆ ಹೊಂದಿರುವ ಮೋದಿಯವರ ಕಟೌಟ್‌ಗಳನ್ನು ಗಮನಿಸುತ್ತಿರುವ ಸಾರ್ವಜನಿಕರು ಕನ್ನಡ ನಾಡಿನಲ್ಲಿ ಕನ್ನಡಕ್ಕೆ ದ್ರೋಹವಾಗುತ್ತಿದೆ. ಪರಭಾಷಿಕರ ಆಳ್ವಿಕೆ ಮತ್ತು ಪ್ರದರ್ಶನದಿಂದ ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂದು ಗುಡುಗುತ್ತಿದ್ದಾರೆ. ಮೇಲಾಗಿ ಕೇಂದ್ರ ಸಚಿವರು ವಾಸವಿರುವ ಹುಬ್ಬಳ್ಳಿಯಲ್ಲಿಯೇ ಕನ್ನಡಕ್ಕೆ ದ್ರೋಹವಾಗುತ್ತಿರುವ ಘಟನೆಗಳು ನಡೆಯುತ್ತಿದ್ದರೂ ನಾವೆಲ್ಲ ನೋಡಿಕೊಂಡು ಸುಮ್ಮನಿರುವಂತಾಗಿದೆ. ವ್ಯಾಪಾರಸ್ಥ ಅಂಗಡಿಗಳ ಮೇಲೆ ದೌರ್ಜನ್ಯ ತೋರಿದ ಕನ್ನಡಪರ ಹೋರಾಟಗಾರರು ಹುಬ್ಬಳ್ಳಿಯಲ್ಲಿ ಮಾತ್ರ ಕನ್ನಡಕ್ಕೆ ಇಷ್ಟೊಂದು ಅನ್ಯಾಯವಾದರೂ ಗಾಢನಿದ್ರೆಯಲ್ಲಿದ್ದಾರೆ” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ನಿವಾಸಿ ರಾಮಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮಗ ಸರಿಯಾಗಿ ಕನ್ನಡಾನ ಓದಾಕ ಬರಾಂಗಿಲ್ಲ. ಯಾಕಂದ್ರ, ನಾವು ಹೆಚ್ಚಿಗಿ ಸಾಲಿ ಕಲಿತವರಲ್ಲ. ಹಿಂಗಾಗಿ, ಹಿಂದಿ ಮತ್ತು ಇಂಗ್ಲಿಷ್‌ನೊಳಗ ಬೋರ್ಡ್ ಹಾಕಿದರ ನಮಗೇನು ಗೊತ್ತಾಕೈತಿ? ಹೇಳ್ರಿ. ಆಂಧ್ರ, ಕೇರಳ, ಮಹಾರಾಷ್ಟ್ರ ಇಂತಹ ಬ್ಯಾರೇ ರಾಜ್ಯದೊಳಗ ನೋಡಿದ್ರ ಅವರ ಭಾಷೇನಾ ಇರತೈತಿ. ಆದ್ರ ನಮ್ ಕರ್ನಾಟಕದಾಗ ಕನ್ನಡಾ ಬಿಟ್ಟ ಬ್ಯಾರೆ ಭಾಷೆಗಳನ್ನು ತಂದು ಹೇರತಾರಲ್ಲ ಎಷ್ಟು ಸರಿ, ನೋಡ್ರಿ! ಅದರಾಗೂ ಈ ರೈಲ್ವೆ ಸ್ಟೇಷನ್‌ನಿಂದ 2ರಿಂದ 3 ಕಿಲೋ ಮೀಟರ್ ದೂರದಾಗ ಇರೋ ಪ್ರಲ್ಹಾದ್ ಜೋಶಿಯವರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಂತ ಅನ್ನಿಸ್ತೈತಿ. ಅವರು ತಮ್ಮ ಭಾಷಣದೊಳಗ ನಾನೂ ಕನ್ನಡಿಗ, ಕನ್ನಡ ನನ್ನ ಉಸಿರು ಅಂತಾರ, ಆದ್ರ, ಅವರು ಇರೊ ಜಾಗದಾಗ ಕನ್ನಡಕ್ಕೆ ಅನ್ಯಾಯ ಅಗಾಕತ್ತೈತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷ ಅಮೃತ್ ಇಜೇರಿ ಈ ದಿನ.ಕಾಮ್ ಜತೆಗೆ ಮಾತನಾಡಿ, “2000 ವರ್ಷ ಇತಿಹಾಸವಿರುವ ನಮ್ಮ ಹೆಮ್ಮೆಯ ಕನ್ನಡ ಭಾಷೆಯ ಮುಂದೆ 600 ವರ್ಷ ಇತಿಹಾಸ ಇರುವ ಹಿಂದಿ ಏನೂ ದೊಡ್ಡದಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂದು ಬಿಂಬಿಸಿ ಜನರಿಗೆ ತಪ್ಪು ಸಂದೇಶ ರವಾನಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಭಾರತವು ಒಕ್ಕೂಟ ವ್ಯವಸ್ಥೆ ಮತ್ತು ಜಾತ್ಯತೀತ ದೇಶ. ಇಲ್ಲಿ ಎಲ್ಲರಿಗೂ ಸಮಾನವಾಗಿ ಬದುಕಲು, ಅವರವರ ಭಾಷೆ ಮಾತನಾಡಲು ಅವಕಾಶವಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಮೊದಲ ಪ್ರಾಧಾನ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕನ್ನಡ ಸೇವೆಯಲ್ಲಿ ದ್ವಂದ್ವನೀತಿಯನ್ನು ಅನುಸರಿಸುತ್ತಿವೆ ಎಂಬುದು ನೋವಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದರು.
ಅನ್ಯ ರಾಜ್ಯದ ರಾಜಕೀಯ ನಾಯಕರು ಕರ್ನಾಟಕಕ್ಕೆ ಬಂದಾಗ, ಹಿಂದಿ ಭಾಷೆಯನ್ನೇ ಅನುವಾದಿಸಿ ಮಾತನಾಡುವುದು ಆಯಾ ಭಾಷೆಗಳ ಹಿಡಿತವನ್ನೇ ಸಾಧಿಸುವ ಕೆಲಸ ನಡೆದಿದೆ. ಉದಾಹರಣೆಗೆ ಮೋದಿ ಅಥವಾ ರಾಹುಲ್ ಗಾಂಧಿ ಬಂದಾಗ ಅವರು ಹಿಂದಿಯಲ್ಲೇ ಮಾತನಾಡುತ್ತಾರೆ. ಇದರಿಂದ ಹಿಂದಿಯೇ ನಮ್ಮ ತಾಯಿ ತಂದೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಕನ್ನಡಿಗರಾಗಿರುವ ನಾವು ಯಾವತ್ತಿಗೂ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಒಪ್ಪಿಕೊಳ್ಳುವುದೇ ಇಲ್ಲ. ಕಾರಣ ಹಿಂದಿ ಕೇವಲ ಒಂದು ಸಂಚಾರಿ ಭಾಷೆ ಮಾತ್ರ. ಕೇಂದ್ರ ಸರ್ಕಾರದ ನಾಲ್ಕನೇ ಸಚಿವ ಪ್ರಲ್ಹಾದ್ ಜೋಶಿಯವರು ಹುಬ್ಬಳ್ಳಿಯಲ್ಲೇ ಇದ್ದರೂ ಕನ್ನಡ ಮಾಯವಾಗಿರುವುದು ಬೇಸರದ ಸಂಗತಿ” ಎಂದರು.
“ನಾವು ಕನ್ನಡದಲ್ಲೇ ಹುಟ್ಟಿದ್ದೇವೆ ಕನ್ನಡಕ್ಕಾಗೇ ಬದುಕುತ್ತೇವೆ ಎಂದು ಭಾಷಣ ಮಾಡುವ ಕೇಂದ್ರ ಸಚಿವರು ಕನ್ನಡ ಉಳಿಸಲು ಏನು ಮಾಡಿದ್ದಾರೆ? ಏನೂ ಇಲ್ಲ. ನರೇಂದ್ರ ಮೋದಿಯವರ ಬಲಗೈಯಂತೆ ಇರುವ ಪ್ರಲ್ಹಾದ್ ಜೋಶಿಯವರು ಮೋದಿಯವರೊಂದಿಗೆ ಮಾತನಾಡಿ ಸರೋಜಿನಿ ಮಹಿಷಿ ಯೋಜನೆಯಂತೆ ಕರ್ನಾಟಕದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಿಸಲಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಹೇಳಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವಲ್ಲಿ ತಮ್ಮ ಕನ್ನಡ ಪ್ರೇಮವನ್ನು ತೋರಿಸಲಿ” ಎಂದರು.
ಜೋಶಿ ಹೇಳಿಕೆ ಕನ್ನಡ ನಾಡಿಗೆ ಅವಮಾನ: ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ
ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕರ್ನಾಟಕದಲ್ಲಿ ಒಂದು ಕೋಮಿನ ತುಷ್ಟೀಕರಣ ವ್ಯವಸ್ಥೆ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದು ತಾವೇ ಒಂದು ಧರ್ಮದ ತುಷ್ಟೀಕರಣ ಮಾಡುತ್ತಿದ್ದಾರೆ. ಆಂಗ್ಲರನ್ನು ಹೊಡೆದೋಡಿಸಿ 60 ವರ್ಷ ಅಧಿಕಾರ ಮಾಡಿದ ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಕೊಟ್ಟ ಪಕ್ಷವಾಗಿದೆ. ಶಾಂತಿಯ ತೋಟವಾದ ಕನ್ನಡ ನಾಡನ್ನು ತಾಲಿಬಾನ್ ಅಫ್ಘಾನಿಸ್ತಾನ್‌ಗೆ ಹೋಲಿಸಿರುವುದು ಕನ್ನಡ ನೆಲಕ್ಕೆ ಮಾಡಿದ ಅವಮಾನವಾಗಿದೆ” ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದ ಕೇಂದ್ರ ಸಚಿವರು ಸಂಸ್ಕೃತ ಪಂಡಿತರ ಪರವಾದವರು,,,ಆ ಕ್ಷೇತ್ರದ ಇತರ ವರ್ಗಗಳ ಒಡಕನ್ನು ಮತ್ತು ಹುಬ್ಬಳ್ಳಿಯ ಇದಗಾ ಮೈದಾನದ ವಿವಾದವನ್ನು ಬಂಡವಾಳ ಮಾಡಿಕೊಂಡು ಅಧಿಕಾರ ಮಜಾ ಮಾಡಿದವರು,,, ಉತ್ತರ ಕರ್ನಾಟಕದ ಅವಳಿ ನಗರಗಳನ್ನು ಕರ್ನಾಟಕದ ಅಭಿವೃದ್ಧಿ ಹೊಂದಿದ ಪ್ರಮುಖ ನಗರಗಳಲ್ಲಿ ಒಂದಾಗಿ ಬೆಳೆಸಬಹುದಿತ್ತು , ಜನರು ಈಗಲೂ ಎಚ್ಚೆತ್ತುಕೊಳ್ಳದೇ ಹೋದರೆ,,ಓ ಉತ್ತರ ಕರ್ನಾಟಕದವರಾ ಅನ್ನುವ ಅಸಡ್ಡೆಗೆ ಗುರಿಯಾಗುವುದು ತಪ್ಪುವುದಿಲ್ಲ,,,