ಭಾರತದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಕುರಿತಾದ ಹಲವಾರು ಅಪರಾಧ ಪ್ರಕ್ರಿಯೆಗಳು ನ್ಯಾಯಾಲಯದ ಮೆಟ್ಟಿಲನ್ನು ಏರುತ್ತಲೇ ಇವೆ. ಇಂತಹ ದುರ್ನಡತೆಗಳನ್ನು ಮಟ್ಟಹಾಕಲು ಮೊದಲು ಮಹಿಳೆಯರು ಮೊಬೈಲ್ ಮತ್ತು ಜಾಲತಾಣದ ಬಳಕೆಯ ಕುರಿತು ಎಚ್ಚರವಹಿಸಬೇಕು ಎಂದು ಸಹಾಯಕ ಪ್ರಾಧ್ಯಾಪಕಿ ಡಾ ಶಶಿರೇಖಾ ಮಾಳಗಿ ಹೇಳಿದರು.
ಅಧಿವಕ್ತ ಪರಿಷತ್ ಧಾರವಾಡ ಜಿಲ್ಲಾ ಘಟಕದಿಂದ ಡಾ ಜಿ ಎಂ ಪಾಟೀಲ್ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಮಹಿಳೆಯರ ರಕ್ಷಣೆ ಮತ್ತು ಅಭಿವೃದ್ಧಿಪಡಿಸುವಲ್ಲಿ ವಕೀಲರ ಪಾತ್ರ” ಎಂಬ ವಿಷಯದ ಕುರಿತು ಮಾತನಾಡಿದರು.
“ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ ಕಂಡುಬರುವಂತಹ ಬೆದರಿಕೆ, ಫ್ರಾಡ್ ಮೆಸೇಜ್ ಹಾಗೂ ಫ್ರಾಡ್ ಕರೆಗಳಿಗೆ ಗಮನಹರಿಸದೆ ಅಂತಹವುಗಳಿಗೆ ಪ್ರತ್ಯುತ್ತರ ನೀಡದೇ ನಿರಾಕರಿಸಬೇಕು. ಅಷ್ಟೇ ಅಲ್ಲದೆ ಯಾವುದೇ ವ್ಯಯಕ್ತಿಕ ಮಾಹಿತಿಯನ್ನು ಯಾವುದೇ ಅಪರಿಚಿತ ವ್ಯಕ್ತಿಯ ಜತೆಗೆ ಹಂಚಿಕೊಳ್ಳದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೋಟೋಗಳನ್ನು ರವಾನಿಸುವಾಗ, ಪೋಸ್ಟ್ ಮಾಡುವಾಗಲೂ ತುಂಬಾ ಜಾಗರೂಕತೆಯಿಂದ ಇರಬೇಕು” ಎಂದು ಹೇಳಿದರು.
“ಇಡೀ ವಿಶ್ವದಲ್ಲೇ ಸೈಬರ್ ಸ್ಟಾಕಿಂಗ್ ಪ್ರಕರಣದಲ್ಲಿ ಭಾರತವು 3ನೇ ಸ್ಥಾನ ಪಡೆದಿದ್ದು, ಇಂತಹ ಪ್ರಕರಣದಲ್ಲಿ ಹೆಚ್ಚಾಗಿ 14 ರಿಂದ 17 ವರ್ಷದ ಹೆಣ್ಣು ಮಕ್ಕಳೇ ಕಂಡುಬರುತ್ತಿದ್ದಾರೆಂದು ವರದಿ ಮೂಲಕ ತಿಳಿಯಲಾಗಿದೆ. ಅಷ್ಟೇ ಅಲ್ಲದೆ ಮುಖ್ಯವಾಗಿ ಪ್ರತಿಯೊಬ್ಬ ಮಹಿಳೆಯರ ರಕ್ಷಣೆಗಾಗಿ(ಸೈಬರ್ ಸ್ಟಾಕಿಂಗ್) ಇತ್ತೀಚಿಗೆ ಕೇಂದ್ರ ಸರ್ಕಾರ ಹೊರಡಿಸಿದ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಈ ಸೈಬರ್ ತಂತ್ರಜ್ಞಾನದ ಬಗ್ಗೆ ಅರಿವು ಹೊಂದಿರಬೇಕು” ಎಂದು ಹೇಳಿದರು.
“ಕಾನೂನಿನ ಮೂಲಕ ಮಾಹಿತಿ ನೀಡುವಂತೆ ಹಲವಾರು ಶಿಬಿರ-ಕಾರ್ಯಕ್ರಮಗಳನ್ನು ಆಯೋಜಿಸಿ, ಅವರಿಗೆ ಶಿಕ್ಷಣ, ಕಾನೂನು ಅರಿವು, ಆತ್ಮ ವಿಶ್ವಾಸ ಈ ಮೂರು ಅಂಶಗಳನ್ನು ಕಾನೂನು ಜ್ಞಾನದ ಮೂಲಕ ತಿಳಿಸಿ ಮಹಿಳೆಯರ ರಕ್ಷಣೆ ಮತ್ತು ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬ ವಕೀಲರ ಪ್ರಮುಖವಾದ ಕರ್ತವ್ಯವಾಗಿದೆ. ಆಗ ಮಾತ್ರ ಮಹಿಳೆಯು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಬಲಿಷ್ಠಳಾಗಳು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದೀರಾ? ವಿಜಯಪುರ | ದೇಸು ಗೇಮು ಚವ್ಹಾಣ ಕಾಂಗ್ರೆಸ್‌ಗೆ ಮರು ಸೇರ್ಪಡೆ
ಅತಿಥಿ ಹಾಗೂ ಪ್ರಾಂಶುಪಾಲ ಸಂಜಯ್ ಪಾಟೀಲ್, ಅಧಿವಕ್ತ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಎಂ ಲಕ್ಷಟ್ಟಿ, ಜಿಲ್ಲಾಧ್ಯಕ್ಷ ಟಿ ಎಸ್ ಕ್ವಾಟಿಹಳ್ಳಿ ಹಾಗೂ ಜಿಲ್ಲಾ ಉಪಾಧ್ಯಕ್ಷೆ ಸಾವಿತ್ರಿ ಕುಲಕರ್ಣಿ ಇದ್ದರು.
