ಗ್ರಾಮ ಪಂಚಾಯತಿ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವುದರ ಮೂಲಕ ಸರ್ಕಾರಗಳು ಎಡವಿದಾಗ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಡಗೌಡ ಧಾರವಾಡದಲ್ಲಿ ಹೇಳಿದರು.
ನಗರದ ನಿವೃತ್ತ ನೌಕರರ ಭವನದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯತ್ ನೌಕರರ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಗ್ರಾಮ ಪಂಚಾಯತಿ ನೌಕರರು ಅತ್ಯಂತ ಹೆಚ್ಚಿನ ಸವಲತ್ತುಗಳನ್ನು ಹೊಂದಿರುವುದು ಕರ್ನಾಟಕವಾಗಿದೆ. ಗುಜರಾತ್ ಮಾಡೆಲ್ ಎನ್ನುವುದೆಲ್ಲ ಸುಳ್ಳು. ಗುಜರಾತ್ ಮಾಡಲ್ ಎನ್ನುತ್ತ ನಮ್ಮನ್ನು ಹತ್ತಿಕ್ಕುವ ಕೆಲಸದ ವಿರುದ್ಧ ನಾವು ಗಟ್ಟಿಯಾಗಿ ಸಂಘಟಿತರಾಗಬೇಕು ಎಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಕಾರ್ಮಿಕರ ಸಂಘಟನೆಯ ನಿರಂತರವಾಗಿ ಹೋರಾಟದ ಫಲವಾಗಿ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಗ್ರಾಮ ಪಂಚಾಯತಿ ನೌಕರರು ಬಲಿಷ್ಠ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಮುಖ್ಯ ಅಗತ್ಯವಾಗಿದೆ ಎಂದರು.
ನೂತನ ಜಿಲ್ಲಾಧ್ಯಕ್ಷ ಚಂದ್ರಗೌಡ ವೆಂಕನಗೌಡ್ರ, ಉಪಾಧ್ಯಕ್ಷ ಗುರುನಾಥ್ ಹೂಗಾರ, ಚನ್ನಬಸಪ್ಪ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ಮಹೇಶ ಹುಲಗೋಡ, ಕಾರ್ಯದರ್ಶಿ ಪರಶುರಾಮ ಪಾಟೀಲ, ವೀರಭದ್ರಯ್ಯ ಬಣ್ಣದನೂಲಮಠ, ಪದ್ಮರಾಜ ಚೆಂದಪ್ಪನವರ, ಖಜಾಂಚಿ ಈಶ್ವರ ಚಂದೂನವರ ಆಯ್ಕೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಮಂಗನಬಾವು ಸೋಂಕು 130ಕ್ಕೆ ಏರಿಕೆ: ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?
ಮಾಜಿ ಜಿಲ್ಲಾಧ್ಯಕ್ಷ ಬಿ.ಐ.ಈಳಿಗೇರ ಪ್ರತಿ ತಾಲೂಕಿನ ಗ್ರಾಮ ಪಂಚಾಯತ್ ನೌಕರರ ಸಭೆ ನಡೆಸಿದ ಕುರಿತು ವಾರ್ಷಿಕ ವರದಿ ಸಲ್ಲಿಸಿದರು. ನಾಗರಾಜ ಮೌಳೆರ ಕಾರ್ಯಕ್ರಮ ನಿರೂಪಿಸಿದರು. ವೀರಪಾಕ್ಷಪ್ಪ ಬಮ್ಮಶೆಟ್ಟಿ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನೌಕರರು ಭಾಗವಹಿಸಿದ್ದರು.