ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಪುತ್ರ ಕರಣ್ ಲಾಡ್ ರಚನೆಯ “ಪ್ರತ್ಯನುಕರಣೆಯ ನ್ಯೂನತೆಗಳು” (A Glitch in The Simulation) ಕನ್ನಡಾನುವಾದ ಕೃತಿಯ ಬಿಡುಗಡೆ ಸಮಾರಂಭ ಕಾರ್ಯಕ್ರಮ ರ್ನಾಟಕ ಮಹಾವಿದ್ಯಾಲಯದ ಸೃಜನಾ ರಂಗಮಂದಿರದಲ್ಲಿ, ಸಂತೋಷ್ ಲಾಡ್ ಫೌಂಡೇಶನ್ ಮತ್ತು ಧಾರವಾಡ ಶರ್ವಿಲ್ ಪ್ರಕಾಶನ ವತಿಯಿಂದ ಆಯೋಜಿಸಲಾಗಿತ್ತು.
ಕೃತಿಯನ್ನು ಪರಿಚಯಿಸಿದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ ಪಿ ರಮೇಶ್ ಮಾತನಾಡಿ, ಈ ಕೃತಿ ಏಳು ಅಧ್ಯಾಯಗಳನ್ನು ಒಳಗೊಂಡಿದ್ದು ಗೌತಮ ಬುದ್ಧನ ಬಗ್ಗೆ ಹೆಚ್ಚಿನ ವಿವರಗಳಿವೆ. ನಿರಾಕರಣ ವಾದವೂ ಇದರಲ್ಲಿದೆ. ನೈತಿಕತೆ, ತತ್ವಶಾಸ್ತ್ರದ ಐದೂ ಮುಖವನ್ನು, ಗಹನವಾದ ವಿಷಯಗಳನ್ನು ವಿವರಿಸಿ, ಚರ್ಚಿಸಿದ್ದಾರೆ. ಮಾನವೀಯ ಸಮಸ್ಯೆಗಳಿಗೆ ಪರಿಹಾರವನ್ನೂ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ನಿಲುವುಗಳು ಎಲ್ಲವನ್ನೂ ನೀಡಿದ್ದಾರೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ಇದೊಂದು ಅಚ್ಚರಿಯ ಅಭಿವ್ಯಕ್ತಿಯ ಕೃತಿ. ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ. ಆದರೆ ಕರಣ್ ತತ್ವಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇದೊಂದು ಗಮನಾರ್ಹವಾದ ವಿಚಾರ ಎಂದರು.
ಬೈಲೂರು ನಿಷ್ಕಲ ಮಂಟಪದ ತೋಂಟದ ನಿಜಗುಣಪ್ರಭು ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಚಿತ್ತ ಸಮತೆ ಇರಬೇಕು. ಜನರಿಂದು ಭ್ರಮಾಲೋಕದಲ್ಲಿದ್ದಾರೆ. ತಾನು ಏನು ಎಂದು ಪ್ರಶ್ನಿಸಿಕೊಳ್ಳಬೇಕು. ಬಹಳಷ್ಟು ಜನರ ಅನುಕರಣೆಯಲ್ಲಿದ್ದಾರೆ. ಕಾಣುವ ಮನುಷ್ಯನನ್ನು ಪ್ರೀತಿ ಮಾಡದೆ ಕಾಣದ ದೇವರನ್ನು ಪ್ರೀತಿಸಲು ಸಾಧ್ಯವಿಲ್ಲ. ಇಂತಹ ಹಲವು ಅಂಶಗಳನ್ನು ಈ ಕೃತಿ ವಿವರಿಸಿದೆ ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ಸರ್ಕಾರ ಕಿಟೆಲ್ ಅಧ್ಯಯನ ಪೀಠ ಸ್ಥಾಪಿಸಲಿ : ಎಸ್.ವಿ.ಸಂಕನೂರ
ಈ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಆರ್‌ಜೆ, ಐ.ಜಿ.ಸನದಿ, ವಿನಾಯಕ ನಾಯಕ, ಎಂ.ಬಿ. ಕರಡೋಣಿ, ಸಮೀರ ಜೋಶಿ. ಅನುವಾದಕರಾದ ಡಾ. ವಿನಾಯಕ ನಾಯಕ ಮತ್ತು ಡಾ. ಲೋಹಿತ ನಾಯ್ಕರ ಉಪಸ್ಥಿತರಿದ್ದರು.