ಮುಂಗಾರು ಮಳೆ ವೈಫಲ್ಯದಿಂದ ಮುಂಗಾರು ಬೆಳೆ ಕಳೆದುಕೊಂಡಿದ್ದ ಧಾರವಾಡ ಜಿಲ್ಲೆಯ ರೈತರಿಗೆ, ಇದೀಗ ಚಳಿಯ ಬರಗಾಲ ಎದುರಾಗಿದೆ.
ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿ ರೈತರು ಬೇಗ ಬಿತ್ತನೆ ಮಾಡಿದ್ದು, ಶೇ.75 ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಲಾಗಿದೆ. ಆದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ತಾಪಮಾನ ಕಡಿಮೆಯಾಗದ ಕಾರಣ ಕಡಲೆ ಮತ್ತು ಮಾವಿನ ಇಳುವರಿ ಕಡಿಮೆ ಯಾಗುವ ಸಾಧ್ಯತೆ ಇದೆ.
ಈ ಎರಡೂ ಬೆಳೆಗಳಿಗೆ ತಂಪಾದ ವಾತಾವರಣ ಬೇಕು. ಆದರೆ, ಸದ್ಯದ ವಾತಾವರಣದಲ್ಲಿ ಉಷ್ಣತೆ ಹಾಗೇ ಇದೆ. ಡಿಸೆಂಬರ್ ಅಂತ್ಯದವರೆಗೆ ವಾತಾವರಣ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.
ಹಿಂಗಾರು ಮಳೆಯ ಭರವಸೆ ಇಟ್ಟು ಬಿತ್ತಿದ್ದರೈತರು ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಕ್ಷವನ್ನು ಬೋರ್‌ವೆಲ್ ನೀರು, ಹೊಳೆ ನೀರು, ಟ್ಯಾಂಕರ್‌ಗಳ ಮೂಲಕ ನೀರು ಹರಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಈಗ ಚಳಿಗಾಲಕ್ಕೆ ಇರಬೇಕಿರುವಷ್ಟು ಚಳಿ ಬೀಳದೆ ಬೆಳೆ ಆರೋಗ್ಯವಾಗಿ ಬೆಳೆಯಲು ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ರೈತರು.
ಮುಂಗಾರು ಬೇಸಾಯಕ್ಕೂ ಹಿಂಗಾರು ಬೇಸಾಯಕ್ಕೂ ಇರುವ ವ್ಯತ್ಯಾಸವೆಂದರೆ ಮುಂಗಾರು ಬೆಳೆಗಳಿಗೆ ಬಿತ್ತನೆಯ ಸಮಯದಿಂದ ಕೊಯ್ಲು ಮಾಡುವವರೆಗೆ ಮಳೆ ಬೇಕು. ಹಿಂಗಾರು ಬಿತ್ತನೆ ಸಮಯದಲ್ಲಿ ಮಳೆಯಾದರೆ ಸಾಕು. ಆದರೆ, ಬೆಳೆ ಕೊಯ್ಲು ಆಗುವ ತನಕ, ಹವಾಮಾನವು ತಂಪಾಗಿರಬೇಕು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹವಾಮಾನವು ಬೆಚ್ಚಗಿರುತ್ತದೆ. ಬೆಳಗಿನ ಸಮಯದಲ್ಲಿ ಒಂದೆರಡು ಗಂಟೆಗಳ ಕಾಲ ಮಾತ್ರ ತಂಪಾದ ಹವಾಮಾನವಿರುತ್ತದೆ.
ಕೃಷಿ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2.5ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ, 1.5ಲಕ್ಷ ಹೆಕ್ಟೇರ್ ಅಂದರೆ ಶೇ.75ರಷ್ಟು ಬಿತ್ತನೆಯಾಗಿದೆ. ಏಕೆಂದರೆ ಬಿತ್ತನೆ ಸಮಯದಲ್ಲಿ ಮಳೆ ಆಗಿರಲಿಲ್ಲ.
ಧಾರವಾಡ ಜಿಲ್ಲೆಯಲ್ಲಿ ಕಡಲೆ ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ರೈತರು ಒಂದು ಲಕ್ಷ ಹೆಕ್ಟೇರ್ ಗುರಿಯನ್ನು ಮೀರಿ, 1.5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. 16,088 ಹೆಕ್ಟೇರ್ ಗುರಿಗೆ, 9,254 ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆಯಾಗಿದೆ. ಉಳಿದ ಜಮೀನಿನಲ್ಲಿ ಜೋಳ ಮತ್ತಿತರ ಬೆಳೆಗಳನ್ನು ಬಿತ್ತಲಾಗಿದೆ.
ಆರ್ದ್ರತೆಯ ಕೊರತೆಯಿಂದ ಕಡಲೆ ಬೆಳೆ ಒಣಗುತ್ತಿದೆ ಮತ್ತು ಬೆಳೆಗೆ ಕೀಟಗಳು ಕಾಡುವ ಅಪಾಯವನ್ನು ರೈತರು ಎದುರಿಸುತ್ತಿದ್ದಾರೆ. ಮುಂಗಾರು ಬೆಳೆ ಕೈಗೆ ಸಿಗದಿದ್ದಕ್ಕೆ ತುಂಬಾ ಬೇಗ ಹಿಂಗಾರು ಬೆಳೆ ಬಿತ್ತಿದ್ದೇವೆ ಈಗ ಬೆಳೆ ಕೈಕೊಡುವ ಹಾಗಿದೆ, ಮುಂದೆ ಏನು ಮಾಡುವುದು ತೋಚದಂತಾಗಿದೆ ಎನ್ನುತ್ತಿದ್ದಾರೆ ರೈತರು.