ಕೇಂದ್ರ ಸರ್ಕಾರ ಹೊರಡಿಸಿದ ಕಾನೂನಿಂದ ಲಾರಿ ಚಾಲಕರು ಈಗಾಗಲೇ ಸ್ಟೇರಿಂಗ್ ಛೋಡೋ ಆಂದೋಲನವನ್ನು ಆರಂಭಿಸಿದ್ದು, ಕೇಂದ್ರ ಸರ್ಕಾರದ ಕಾನೂನನ್ನು ವಿರೋಧಿಸಿ ಇಂದು ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಲಾರಿ ಚಾಲಕರ, ಮಾಲೀಕರ ಸಂಘ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದೆ.
ಹಿಟ್ ಅಂಡ್ ರನ್ ಕೇಸ್‌ಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 7ಲಕ್ಷ ರೂಪಾಯಿ ದಂಡ ವಿಧಿಸುವ ನೀತಿಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಇದು ಜನ ವಿರೋಧಿ ಕಾನೂನು. ಇದು ಲಾರಿ ಚಾಲಕರಿಗೆ ಅಷ್ಟೇ ಅಲ್ಲ ಪ್ರತಿಯೊಂದು ವಾಹನ ಸವಾರರಿಗೆ ಸಂಬಂಧ ಪಡುತ್ತದೆ. ಅವರ ಕಡಿಮೆ ಪಗಾರದಲ್ಲಿ ಇಂತಹ ಘಟನೆ ಆದ್ರೆ, ಅಷ್ಟು ಹಣ ಮತ್ತು 10ವರ್ಷ ಜೈಲು ಶಿಕ್ಷೆ ಕೊಟ್ಟರೆ, ಅವರ ಕುಟುಂಬ ಬೀದಿಗೆ ಬರುತ್ತದೆ.
ಕೇಂದ್ರ ಸರ್ಕಾರದ ಈ ಕಾನೂನು ವಾಹನ ಸವಾರರಿಗೆ ತುಂಬಾ ತೊಂದರೆ ಕೊಡುತ್ತಿದೆ. ಕೂಡಲೆ ಈ ನೀತಿಯನ್ನು ಹಿಂಪಡೆಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯ ದುರ್ಗದ ಬೈಲ್‌ನಿಂದ ಆಟೋ ಚಾಲಕರ ಸಂಘ, ಲಾರಿ ಚಾಲಕರ ಸಂಘ ಒಗ್ಗೂಡಿ ರ್ಯಾಲಿ ಮಾಡುವುದರ ಮೂಲಕ, ತಹಸೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಮೂರು ದಿನದಿಂದ ಲಾರಿ ಚಾಲಕರು ಸ್ವಯಂ ಪ್ರೇರಿತವಾಗಿ, ಯಾವುದೇ ಗೂಡ್ಸ್ ರವಾನಿಸದೆ, ʼಸ್ಟೇರಿಂಗ್ ಛೋಡೋ ಆಂದೋಲನʼ ಆರಂಭಿಸಿದ್ದಾರೆ. ಈ ಕಾನೂನು ಹಿಂಪಡೆಯುವರೆಗೂ ಈ ಹೋರಾಟ ಮುಂದುವರೆಸುತ್ತೇವೆಂದು ಎಚ್ಚರಿಕೆ ಕೊಟ್ಟಿದ್ದಾರೆ.