ಕಳಸಾ ಬಂಡೂರಿ ನಾಲಾ ಮಹದಾಯಿಗಾಗಿ ಉತ್ತರ ಕರ್ನಾಟಕದ ರೈತರು ಸಾಕಷ್ಟು ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ʼಕೇಂದ್ರ ಸರ್ಕಾರ ನಾಲಾ ಯೋಜನೆ ಮಾಡಲು ವಿಳಂಬ ಮಾಡುತ್ತಿದೆʼ ಎಂದು ಆರೋಪಿಸಿ ಮಹದಾಯಿ ಕಳಸ ಬಂಡೂರಿ ಹೋರಾಟ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿದೆ.
ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ, ಮಹದಾಯಿ ಕಳಸ ಬಂಡೂರಿ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ, ತಲೆಯ ಮೇಲೆ ಖಾಲಿ ಕೊಡ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ರೈತ ಪರ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
“ಮಹದಾಯಿ ಮತ್ತು ಕಳಸಾ–ಬಂಡೂರಿ ಯೋಜನೆ ಜಾರಿಗೆ ಅನಗತ್ಯ ವಿಳಂಬವಾಗಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹದಾಯಿ ವಿಷಯ ಕುರಿತು ಚರ್ಚಿಸಬೇಕು. ಕೂಡಲೇ ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದರು.
ಕುಂದಗೋಳ ತಾಲೂಕು ರೈತ ಸಂಘದ ಮುಖಂಡ ಶಂಕರಗೌಡ ದೊಡವಾಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದ್ವಿಮುಖ ನೀತಿಯನ್ನು ಅನುಸರಿಸುತ್ತಿವೆ. ಈಗಾಗಲೆ ಕೇಂದ್ರ ಸರ್ಕಾರ ಎಲ್ಲವೂ ಸರಿಯಾಗಿ ನೆರವೇರಿದೆ ಎಂದು ಡಿಪಿಆರ್ ಹೊರಡಿಸಿ ಕಟೌಟ್‌ಗಳನ್ನು ಹಾಕಿಸಿದ್ದು, ಗ್ರೀನ್ ಲ್ಯಾಂಡ್ ಪರ್ಮಿಷನ್ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೇಳಿದೆ” ಎಂದರು.
“ಉತ್ತರ ಕರ್ನಾಟಕದ ಬಗ್ಗೆ ಎರಡೂ ಸರ್ಕಾರಗಳೂ ದ್ವಿಮುಖ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಇತ್ತ ರಾಜ್ಯ ಸರ್ಕಾರವಾದರೂ ಕೇಂದ್ರದ ಮೇಲೆ ಸರಿಯಾದ ಕ್ರಮದಲ್ಲಿ ಒತ್ತಡ ಹೇರುತ್ತಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಸಿಕಲ್‌ನಲ್ಲಿ ಕಚೇರಿಗೆ ತೆರಳಿ ಗಮನ ಸೆಳೆದ ಡಿಸಿ, ಎಸ್‌ಪಿ
“ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟವನ್ನು ರಾಜಕಾರಣಿಗಳು ತಮ್ಮ ಅಧಿಕಾರದ ಅಸ್ತ್ರವನ್ನಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಅವರವರ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಯಾವೊಬ್ಬ ರಾಜಕಾರಣಿಯೂ ಈ ಯೋಜನೆ ಜಾರಿಯಾಗಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಮಹದಾಯಿ ಕುರಿತು ಸದನದಲ್ಲಿ ಚರ್ಚೆಯಾಗದೆ ಇದ್ದಲ್ಲಿ ನಾವು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ನಡೆಯನ್ನು ಹೊಂದಿದ್ದೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.