ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನವೆಂಬರ್ 22ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದವರ ಕುಂದು ಕೊರತೆಗಳ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸಮುದಾಯದ ವ್ಯಕ್ತಿಗಳ ವೈಯಕ್ತಿಕ ಸಮಸ್ಯೆಗಳನ್ನು, ಸಮುದಾಯದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಅಧಿಕಾರಿಗಳಿಗೆ ಪ್ರತಿ ಕುಂದುಕೊರತೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಪರಿಹರಿಸಬೇಕು. ಸರ್ಕಾರದ ಹಂತದಲ್ಲಿ ಕ್ರಮ ಅಗತ್ಯವಿದ್ದರೆ, ವರದಿಯೊಂದಿಗೆ ಶಿಪಾರಸ್ಸು ಮಾಡುವಂತೆ ನಿರ್ದೇಶಿಸಿದರು. ಎಲ್ಲ ತಹಸೀಲ್ದಾರರು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದವರ ಕುಂದುಕೊರತೆಗಳ ಸಭೆಯನ್ನು ತಾಲೂಕು ಮಟ್ಟದಲ್ಲಿ ಜರುಗಿಸಲು ಸೂಚಿಸಿದರು.
ಹುಬ್ಬಳ್ಳಿಯ ರಾಜಗೋಪಾಲ ನಗರದ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕರ ನೇಮಕ, ಕುಡಿಯುವ ನೀರು ವ್ಯವಸ್ಥೆ ಹಾಗೂ ಸಂಸ್ಥೆಯ ಹೆಸರು ತಿದ್ದುಪಡಿ ಕುರಿತು ಶಿವಶಂಕರ ಭಂಡಾರಿ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ತಕ್ಷಣ ಕ್ರಮವಹಿಸಲು ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಮನ್ವಯ ಸಾಧಿಸಲು ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ವಿವಿಧ ನಗರಗಳಲ್ಲಿ ಆಶ್ರಯ ಹಾಗೂ ವಿವಿಧ ವಸತಿ ಯೋಜನೆ ಮನೆಗಳ ಕುರಿತು ಈಗಾಗಲೇ ಅಧಿಕಾರಿಗಳ ನೇತೃತ್ವದಲ್ಲಿ ಸಮೀಕ್ಷೆ ಮಾಡಲಾಗಿದ್ದು, ಬಾಡಿಗೆದಾರರು, ಮಾಲೀಕರು, ಬೀಗಹಾಕಿದ ಮನೆಗಳು ಹಾಗೂ ಮಾರಾಟ ಮಾಡಿದ ಮನೆಗಳ ಕುರಿತು ಸಮೀಕ್ಷಾ ವರದಿ ತಯಾರಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸಚಿವರಿಗೆ ಸಲ್ಲಿಸಲಾಗುವುದು ಎಂದರು.
ವಿವಿಧ ಕುಂದುಕೊರತೆಗಳ ಕುರಿತು ದಾನಪ್ಪ ಕಬ್ಬೇರ, ಮೋಹನ ಹಿರೇಮನಿ, ಆನಂದ ಅದ್ವಾನಿ, ಅಶೋಕ ದೊಡಮನಿ, ಲಕ್ಷ್ಮಣ ದೊಡಮನಿ, ಚಿಕ್ಕತುಂಬಳ, ಲಕ್ಷ್ಮಣ ಬಕ್ಕಾಯಿ, ಕಲ್ಮೇಶ ಹಾದಿಮನಿ, ಗುರುನಾಥ ಉಳ್ಳಿಕಾಶಿ, ತಿಪ್ಪಣ್ಣ ತಳವಾರ, ಸೇರಿದಂತೆ ವಿವಿಧ ಮುಖಂಡರು ಮಾತನಾಡಿದರು.