ಕರ್ನಾಟಕದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕಳಸಾ-ಬಂಡೂರಿ ಮತ್ತು ಮಹಾದಾಯಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಆರೋಪಿಸಿದ್ದಾರೆ.
ಧಾರವಾಡದಲ್ಲಿನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕನಾಥ ಶಿಂಧೆ ಅವರನ್ನು ತಮ್ಮ ಪರ ಪ್ರಚಾರ ಮಾಡಲು ಪ್ರಹ್ಲಾದ ಜೋಶಿ ಅವರು ಕರೆಸಿದ್ದಾರೆ. ಅವರು ಜೋಶಿ ಪರವಾಗಿ ಮತ ಕೇಳುತ್ತಿದ್ದಾರೆ. ಶಿಂಧೆ ಅವರನ್ನು ಕರೆಸಿದ್ದರ ಬಗ್ಗೆ ಜನರೇ ಪ್ರಶ್ನೆ ಮಾಡಬೇಕು. ಕನ್ನಡ ನಾಡಿನ ಯೋಜನೆಗೆ ಅಡ್ಡಗಾಲು ಹಾಕುವ ಶಿಂಧೆ ಕರೆಸಿ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ದೂರಿದರು.
ಕಳೆದ ಹತ್ತು ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಹಿಂದೆ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿತ್ತು. ಆದರೂ ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಗಳನ್ನು ಏಕೆ ಜೋಶಿ ಅವರು ಸಹಕಾರ ನೀಡಲಿಲ್ಲ. ಇದನ್ನು ಬಿಟ್ಟು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದೂರುತ್ತಾರೆ. ಜೋಶಿ ಅವರು ಈ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.