ಕಾಂಗ್ರೆಸ್ ಸಂವಿಧಾನವನ್ನು ನಂಬುತ್ತದೆ. ಆದರೆ, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಮನುಸ್ಮೃತಿ ನಂಬುತ್ತಾರೆ. ಬಸವಣ್ಣ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವಗಳನ್ನು ನಂಬುವವರು ಜೀವನದಲ್ಲಿ ಎಂದೂ ಆರ್‌ಎಸ್‌ಎಸ್ ಶಾಖೆಗೆ ಕಾಲಿಡಬೇಡಿ ಎಂದು ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.
ಬೀದರ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. “ಮೂರು ಸಾವಿರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ, ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೋದಿಯವರ ಅಸಲಿ ಪರಿವಾರದವರು” ಎಂದು ಟೀಕಿಸಿದರು.
“ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ದೌರ್ಜನ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಗೊತ್ತಿತ್ತು. 16 ವರ್ಷದ ಬಾಲಕಿಯಿಂದ 65 ವರ್ಷದ ತಾಯಿ ಸಮಾನ ಮಹಿಳೆ ಮೇಲೆ ಪ್ರಜ್ವಲ್ ದೌರ್ಜನ್ಯ ಎಸಗಿದ ಚಾರಿತ್ರ್ಯಹೀನ ವ್ಯಕ್ತಿಗೆ ಟಿಕೆಟ್ ಕೊಟ್ಟು, ಅವರ ಮೇಲೆ ಕೈಯಿಟ್ಟು, ಅವರ ಪರ ಮೋದಿಯವರು ಪ್ರಚಾರ ನಡೆಸಿ, ಬಸವಣ್ಣನವರ ನಾಡಿನ ಮತದಾರರಿಗೆ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಬಸವಣ್ಣನವರ ನಾಡಿನಲ್ಲಿ ಕನ್ನಡಿಗರಿಗೆ ಇಂತಹ ದೊಡ್ಡ ಅಪಮಾನ ಎಂದೂ ಆಗಿರಲಿಲ್ಲ” ಎಂದು ಹೇಳಿದರು.
“ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಏಕಾಏಕಿ ಜರ್ಮನಿಗೆ ಓಡಿ ಹೋಗುತ್ತಾನೆ. ಚೋಕ್ಸಿ, ನೀರವ್ ಮೋದಿ, ಮಾಲಿಯಾ, ಮಲ್ಯ ಇವರೆಲ್ಲರಿಗೂ ಓಡಿ ಹೋಗಲು ಅವಕಾಶ ಕೊಟ್ಟಿದ್ದರು. ಈಗ ಅತ್ಯಾಚಾರಿಗಳು ಹೋಗುತ್ತಿದ್ದಾರೆ. ಗುಜರಾತಿನ ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿ ಆರೋಪಿಗಳಿಗೆ ಜೈಲಿನಿಂದ ಹೊರಬಂದ ನಂತರ ಅವರಿಗೆ ಲಡ್ಡು ತಿನ್ನಿಸಿದ್ದರು. ದೆಹಲಿಯ ರಸ್ತೆ ಮೇಲೆ ನೂರಕ್ಕಿಂತ ಹೆಚ್ಚು ದಿನಗಳ ಕಾಲ ಕ್ರೀಡಾಪಟುಗಳು ಲೈಂಗಿಕ ಶೋಷಣೆ ವಿರುದ್ಧ ಪ್ರತಿಭಟಿಸಿದ್ದರು, ಆದರೆ ಮೋದಿಯವರು ಕೇಳಲು ಹೋಗಲಿಲ್ಲ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆದಿತ್ತು. ಅದರ ಬಗ್ಗೆ ಮೋದಿ ಮೌನ ವಹಿಸಿದ್ದರು. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಅದರ ಬಗ್ಗೆ ತನಿಖೆ ನಡೆಸದೆ, ಕುಟುಂಬದವರಿಗೆ ಕೊನೆಯ ಬಾರಿಗೆ ಆಕೆಯ ಮುಖ ಕೂಡ ನೋಡಲು ಬಿಡದೇ, ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಲಾಗಿತ್ತು” ಎಂದು ಹೇಳಿದರು.
“ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಎನ್ನಲಾದ ಪ್ರಜ್ವಲ್ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು ಯಾಕೆ? ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ದೆಹಲಿಯ ರಸ್ತೆಯಲ್ಲಿ ಭಾರತೀಯ ಸಂವಿಧಾನದ ಪ್ರತಿ ಯಾಕೆ ಸಟ್ಟರು? ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಬಿಜೆಪಿಗರು ಆಕಳು ಕೊಲ್ಲುವ ಕಂಪನಿಯಿಂದ ಚಂದಾ ಪಡೆದಿದ್ದಾರೆ ಯಾಕೆ? ಖಾಲಿ ಉಳಿದ ಸರ್ಕಾರಿ ನೌಕರಿ ಯಾಕೆ ಭರ್ತಿ ಮಾಡಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಉತ್ತರಿಸಲಿ ಎಂದು ಆಗ್ರಹಿಸಿದ ಜಿಗ್ನೇಶ್, ಪ್ರಜ್ವಲ್ ರೇವಣ್ಣ ಪ್ರಕರಣ ತನಿಖೆಯಾಗಿ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಲು ಕಾಂಗ್ರೆಸ್ ಸರ್ಕಾರ ಸ್ಪಷ್ಟ ಧೋರಣೆ ಹೊಂದಿದೆ” ಎಂದು ಹೇಳಿದರು.
“ಈ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲಿದೆಯೇ ಎಂಬ ಆತಂಕ ದೇಶದ ಜನರನ್ನು ಕಾಡುತ್ತಿದೆ. ಆರ್‌ಎಸ್‌ಎಸ್, ಬಿಜೆಪಿಯವರು ಕಳೆದ ಹತ್ತು ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಡೆಸಿದ ದಾಳಿಯಿಂದ ಸಹಜವಾಗಿಯೇ ಜನರಿಗೆ ಈ ಪ್ರಶ್ನೆ ಕಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಪತ್ರಕರ್ತರು, ಹೋರಾಟಗಾರರು, ವಿರೋಧ ಪಕ್ಷದ ನಾಯಕರನ್ನು ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯ ಮೂಲಕ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕಿದ್ದಾರೆ. ನಾನು ಪ್ರಧಾನಿ ವಿರುದ್ಧ ಗುಜರಾತಿನಿಂದ ಟ್ವೀಟ್ ಮಾಡಿದಾಗ ನನ್ನನ್ನು ಅಸ್ಸಾಂ ಜೈಲಿಗೆ ಹಾಕಿದ್ದರು. ಇದು ಪ್ರಜಾಪ್ರಭುತ್ವ ಕೊನೆಗಾಣಿಸುವ ಪ್ರಯತ್ನವಲ್ಲದೇ ಮತ್ತೇನೂ? 1925ರಿಂದ ಆರ್‌ಎಸ್‌ಎಸ್ ಮನುಸ್ಮೃತಿ ಜಾರಿಗೆ ತರಲು ಪ್ರಯತ್ನ ನಡೆಸುತ್ತಲೇ ಇದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಢಿಕ್ಕಿ; ಸ್ಥಳದಲ್ಲೇ ಮೂವರು ಸಾವು
ಬಿಜೆಪಿಯವರು ಈ ಚುನಾವಣೆಯಲ್ಲಿ 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ, 400 ರೂ.ಗೆ ಸಿಲಿಂಡರ್ ಕೊಡುತ್ತೇವೆ ಎಂದು ಹೇಳುತ್ತಿಲ್ಲ. ಭಾರತದ ಸಂವಿಧಾನವನ್ನು ಕೊನೆಗಾಣಿಸಲು ಬಿಜೆಪಿಗೆ 400 ಸೀಟುಗಳು ಬೇಕಾಗಿವೆ, ಇದೇ ಬಹುದೊಡ್ಡ ಬಿಜೆಪಿಯ ತಂತ್ರಗಾರಿಕೆಯಾಗಿದೆ. ಇದರಿಂದ ಎಚ್ಚರ ವಹಿಸಬೇಕೆಂದು ತಿಳಿಸಿದರು.