ಡಾ. ಎಪಿಜೆ ಅಬ್ದುಲ್ ಕಲಾಂ ಸಂಘಟನೆ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧಾರವಾಡದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಬಸವಶಾಂತಿ ಮಿಷನ್ ನ ಅಧ್ಯಕ್ಷ ಮಹದೇವ ಹೊರಟ್ಟಿ ನಡೆಸಿಕೊಟ್ಟರು.
ಬಸವಶಾಂತಿ ಮಿಷನ್ ಅಧ್ಯಕ್ಷ ಮಹದೇವ ಹೊರಟ್ಟಿ ಮಾತನಾಡಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತ ರಾಷ್ಟ್ರಪ್ರೇಮಿಗಳು ಮತ್ತೆ ಸಿಗುವುದು ಕಷ್ಟ. ರಾಧಾಕೃಷ್ಣನ್, ಜಾಕಿರ್ ಹುಸೇನ್, ಅಬ್ದುಲ್ ಕಲಾಂ ಈ ಮೂವರು ಒಳ್ಳೆಯ ರಾಷ್ಟ್ರಪತಿಗಳು. ಧಾರವಾಡದ ಮುಸಲ್ಮಾನರು ಗೋಲಿಬಾರಿನಲ್ಲಿ ಬಲಿದಾನ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಧಾರವಾಡದ ಕೊಡುಗೆ ಅಪಾರವಾಗಿದೆ. ಇಲ್ಲಿನ ಮುಸಲ್ಮಾನರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು. ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಅಪಘಾತ, ಬಾಲಾಪರಾಧ, ಅತ್ಯಾಚಾರ ಭಾರತದಲ್ಲಿ ಆಗುತ್ತವೆ. ಬಹುತೇಕ ಸಂಘಟನೆಗಳು ಕ್ರೂರಿಗಳ ಕೈಯಲ್ಲಿರುವುದು ದುರಂತ. ಇವತ್ತಿಗೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ನಾವೆಲ್ಲ ಹೊಸ ದೇಶ ಕಟ್ಟಲು ಧಾರವಾಡ ದಾರಿಯಾಗಬೇಕು. ದೇಶಕಟ್ಟುವ ಕೆಲಸ ಟಿಪ್ಪು ಸುಲ್ತಾನ್ ವೃತ್ತದಿಂದಲೇ ಪ್ರಾರಂಭವಾಗಲಿ ಎಂದರು.
ಧ್ವಜಾರೋಹಣದ ನಂತರ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಭಾರತೀಯರಿಗೆ ರಾಜಕೀಯವಾಗಿ ನ್ಯಾಯ ಸಿಕ್ಕಿದೆಯೇ ಹೊರತು ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಒಂದು ವೇಳೆ ಈ ನ್ಯಾಯ ಸಿಗದಿದ್ದರೆ ತುಳಿತಕ್ಕೆ ಒಳಗಾದ ಜನರು ಪ್ರಜಾಪ್ರಭುತ್ವವನ್ನೇ ಬುಡಮೇಲೆ ಮಾಡಬಹುದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡತನ, ಅಸ್ಪೃಶ್ಯತೆ, ಜಾತಿಯತೆ ನಿರ್ಮೂಲನೆ ಆಗಿಲ್ಲ. ಕೋಮು ಸಂಘರ್ಷ ಮತ್ತು ಧ್ವೇಷ ಸಂಸ್ಕೃತಿ ಬೆಳೆಸುವ ದಿನಗಳು ಬಂದವು. ನಮ್ಮ ದೇಶ ಸಮೃದ್ಧಿಯಿಂದ ಬೆಳೆಯಬೇಕು ಅಂದರೆ ನಾವು ಮೊದಲು ಮತ್ತು ಕೊನೆಗು ಭಾರತೀಯರಾಗಬೇಕು. ನಮ್ಮ ಧರ್ಮಗಳನ್ನು ನಮ್ಮಮನೆಗಳಲ್ಲಿ ಆಚರಿಸೋಣ. ಆಚೇಗೆ ನಾವೆಲ್ಲ ಭಾರತೀಯರು ಎಂಬ ಅರಿವು ನಮ್ಮಲ್ಲಿರಬೇಕು. ನಮಗೆ ಪ್ರಜಾಪ್ರಭುತ್ವ ದೇವರುಮತ್ತು ಸಂವಿಧಾನವೇ ಧರ್ಮಗ್ರಂಥವಾಗಿದೆ ಎಂದರು.
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾತ್, ಸಬ್ ಕಾ ವಿಕಾಸ ಎಂದು ಹೇಳುತ್ತಾರೆ. ಆದರೆ ನಮ್ಮ ದೇಶದ 80% ಜನರು ವಿದೇಶದಲ್ಲಿ ದುಡಿಯುತ್ತಿದ್ದಾರೆ. ಈ ದೇಶದಲ್ಲಿ ದಮನಿತರು, ನೊಂದವರು, ತುಳಿತಕ್ಕೊಳದವರಿಗೆ ವಾಸಮಾಡಲು ಒಂದು ಮನೆ ಸಹಿತ ಇಲ್ಲದಂತಾಗಿದೆ. ಭಾರತ ಬಡತನದತ್ತ ಮುಖಮಾಡಿರುವಾಗ ನೀವು ಹೇಗೆ ವಿಶ್ವಗುರುವಾಗುತ್ತೀರಿ? ಪ್ರಧಾನಿಗಳೇ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರು, ಹಬೀಬ್, ಮಹಮ್ಮದ್ಅಲಿ ಗುಡೂಭಾಯಿ, ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.