- ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೋಟಿ ರೂಪಾಯಿ ಹೂಡಿಕೆ
- ʼತಂತ್ರಜ್ಞಾನದ ಲಾಭ ರೈತರಿಗೆ ತಲುಪುವಂತೆ ಮಾಡಬೇಕುʼ
ಇತ್ತೀಚಿನ ವರ್ಷಗಳಲ್ಲಿ ಕೃಷಿ ರೂಪಾಂತರಗೊಂಡಿದ್ದು, ರೈತರು ಈ ಬದಲಾವಣೆಗಳಿಗೆ ಹೊಂದಿಕೊಂಡು ಆಧುನಿಕ ಕೃಷಿಯತ್ತ ಸಾಗಬೇಕು. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಗತ್ಯವಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ. ಆರ್.ಎಂ ಕುಮ್ಮೂರ್ ಹೇಳಿದರು.
ಅಂತಾರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ರೈತರಿಗಾಗಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. “ದೇಶವು ಅಭಿವೃದ್ದಿಯತ್ತ ಸಾಗುತ್ತಿದೆ. ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ಆದರೆ, ನಮ್ಮ ರೈತರು ಅಭಿವೃದ್ಧಿ ಹೊಂದುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಮಾಡಲು ಮಾನವ ಸಂಪನ್ಮೂಲ ಕಡಿಮೆಯಾಗಿದೆ. ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ಕೃಷಿ ಮಾಡುವುದು ದುಬಾರಿ ವ್ಯವಹಾರವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಭೂಮಿ ಮಂಜೂರಾತಿ, ಹಕ್ಕುಪತ್ರ ವಿತರಣೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ...
“ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ತಂತ್ರಜ್ಞಾನದ ಲಾಭವನ್ನು ರೈತರಿಗೆ ತಲುಪಿಸುವಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಕೃಷಿ ಕ್ಷೇತ್ರದ ತ್ವರಿತ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವದ ಅಗತ್ಯವಿದೆ” ಎಂದು ಧಾರವಾಡದ ನೀರು ಮತ್ತು ಭೂ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ಪೊದ್ದಾರ್ ತಿಳಿಸಿದರು.