ಆದಾಯದ ಕುಸಿತದಿಂದ ನೆಲಕಚ್ಚಿರುವ ಎಪಿಎಂಸಿಗಳಿಗೆ ಮರುಜೀವ ತುಂಬಲು ಬಜೆಟ್‌ನಲ್ಲಿ ಯಾವುದೇ ಯೋಜನೆಯನ್ನು ಘೋಷಣೆ ಮಾಡದಿರುವುದು ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ಕಾಯಿದೆಗಳನ್ನು ಹಿಂಪಡೆಯದಿರುವುದು ರಾಜ್ಯದ ರೈತರಿಗೆ ನಿರಾಶೆ ಮೂಡಿಸಿದೆ ಎಂದು ಎಐಕೆಕೆಎಂಎಸ್ ಕರ್ನಾಟಕ ರಾಜ್ಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕರಣ ನೀಡಿರುವ ಎಐಕೆಕೆಎಂಎಸ್ ಧಾರವಾಡ ಜಿಲ್ಲಾಅಧ್ಯಕ್ಷೆ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳಲ್ಲಿ ಒಂದಾದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಪ್ರಸ್ತುತ ವರ್ಷ ಮುಂಗಾರು ಮಳೆ ವಿಳಂಬದಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬರದ ವಾತಾವರಣವಿದೆ. ರೈತರು ಇದರಿಂದ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಂತು ಅವರ ಆದಾಯವನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಬೇಕಾಗಿತ್ತು. ಒಟ್ಟಾರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕೃಷಿ ಮತ್ತು ತೋಟಗಾರಿಕಾ ವಲಯಕ್ಕೆ ಅನುದಾನ ಕಡಿತಗೊಳಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಕೊಬ್ಬರಿ, ಹತ್ತಿ, ತೊಗರಿ ಮುಂತಾದ ಬೆಳೆಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ಆದರೆ ರೈತರ ಎಲ್ಲ ಉತ್ಪನ್ನಗಳನ್ನು ಖರೀದಿಸಲು ವಿನಿಯೋಗಿಸಬೇಕಾದ ಆವರ್ತ ನಿಧಿಯನ್ನು ಹೆಚ್ಚಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕೃಷಿ ಉತ್ಪನ್ನಗಳಿಗೆ ಖಚಿತ ಮತ್ತು ನಿಶ್ಚಿತವಾದ ಬೆಲೆ ನಿಗದಿಪಡಿಸುವ ಮಾರುಕಟ್ಟೆ ನೀತಿಯನ್ನು ಪ್ರಕಟಿಸಿಲ್ಲ ಎಂದು ಆರೋಪಿಸಿದ್ದಾರೆ.
ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಬೆಂಬಲ ಬೆಲೆಗಳನ್ನು ನೀಡುವುದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಹಾಗೂ ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಮಾಡಿರುವ ಬೋರ್ಡ್‌ಗಳನ್ನು ಅಭಿವೃದ್ಧಿಪಡಿಸಿ ರೈತರ ಉತ್ಪನ್ನಗಳನ್ನು ಖರೀದಿಸಲು ಬೇಕಾದ ಅನುದಾನವನ್ನು ನೀಡಿಲ್ಲ. ರೈತರನ್ನು ಇನ್ನಷ್ಟು ಸಾಲಗಾರರನ್ನಾಗಿ ಮಾಡಲು ಬಡ್ಡಿ ರಹಿತ ಸಾಲದ ಪ್ರಮಾಣವನ್ನು ಮಾತ್ರ ಏರಿಕೆ ಮಾಡಲಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿ ಕಂಗಾಲಾಗಿರುವ ರೈತರನ್ನೂ ಋಣ ಮುಕ್ತ ಮಾಡುವ ಸಾಲ ಮನ್ನಾದ ವಿಚಾರ ಪ್ರಸ್ತಾಪವಾಗದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ಆರೋಪ; ಸಮಗ್ರ ತನಿಖೆಗೆ ಆದೇಶ
ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕಿಂತ ಹೆಚ್ಚು ರೈತರು ಸುಮಾರು 80-90 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿಯ ಹಕ್ಕು ಪತ್ರಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಈ ರೈತರಿಗೆ ಹಕ್ಕುಪತ್ರ ನೀಡುವ ಯಾವುದೇ ವಿಚಾರ ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು ನೋವಿನ ವಿಷಯ. ಒಟ್ಟಾರೆಯಾಗಿ ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಮತ್ತು ರೈತರ ನಿರ್ಲಕ್ಷ ಖಂಡನೀಯ. ಹಲವು ಸಂಕಷ್ಟಗಳಿಂದ ಬಳಲುತ್ತಿರುವ ರೈತ ಸಮುದಾಯದ ಬೆಂಬಲಕ್ಕೆ ಈಗಲಾದರೂ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.