ಧಾರವಾಡ ತಾಲೂಕಿನ ಮನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 6 ತಿಂಗಳಿಂದ ದುರಸ್ತಿಗೆ ಬಂದಿದ್ದು, ನೀರು ಬಾರದೆ ಬಂದ್ ಆಗಿದೆ. ಗ್ರಾಮದಲ್ಲಿ ಒಟ್ಟು ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಬಸ್ ನಿಲ್ದಾಣದ ಪಕ್ಕದಲ್ಲಿರುವ ನೀರಿನ ಘಟಕವು ಬಂದ್ ಆಗಿ ಸ್ಥಳೀಯರಿಗೆ ಸಮಸ್ಯೆ ಉಂಟಾಗಿದೆ. ಹಾಗೆಯೇ ಗ್ರಾಮದಲ್ಲಿ ಹೇಳಿಕೊಳ್ಳುವಷ್ಟು ಏನೂ ಅಭಿವೃದ್ದಿ ಇನ್ನೂ ಆಗಿಲ್ಲ. ಇದಕ್ಕೆಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ದೂರುಗಳು ಕೇಳಿಬಂದಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 467 ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ 111 ಕ್ಕೂ ಹೆಚ್ಚು ನೀರಿನ ಘಟಕಗಳು ಬಂದ್ ಆಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆಗಳು ಕ್ರಮೇಣ ಹೆಚ್ಚಾಗಿವೆ. ಧಾರವಾಡ ತಾಲೂಕಿನಲ್ಲೇ ಒಟ್ಟು 103 ನೀರಿನ ಘಟಕಗಳಿವೆ. ಅದೆಷ್ಟೋ ಘಟಕಗಳು ಕದ ಮುಚ್ಚಿದ್ದು, ಅದರಲ್ಲಿ ಮನಸೂರು ಗ್ರಾಮದ ನೀರಿನ ಘಟಕವೂ ಒಂದಾಗಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಇದ್ದಕ್ಕೆಲ್ಲ ಕಾರಣವಾಗಿದೆ. ಆದ್ಧರಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೂ ಒಬ್ಬ ಖಾಯಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಅನ್ನು ನೇಮಿಸಬೇಕು ಎಂದು ಪಂಚಾಯತ್ ಸಿಬ್ಬಂದಿಗಳು ಒತ್ತಾಯಿಸುತ್ತಾರೆ.

ಧಾರವಾಡ ನಗರದಿಂದ 8 ಕಿ.ಮೀ ದೂರದಲ್ಲಿರುವ ಮನಸೂರು ಗ್ರಾಮವು, ಸಂಗೀತ ಕ್ಷೇತ್ರದ ದಿಗ್ಗಜ ಮಲ್ಲಿಕಾರ್ಜುನ ಮನಸೂರು ಅವರ ಹುಟ್ಟೂರು. ಆದರೆ ಅವರ ಗುರುತು ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕಾರ್ಯಯೂ ಈ ಗ್ರಾಮದಲ್ಲಿ ನಡೆದಿಲ್ಲ. ಗ್ರಾಮಸ್ಥರಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಕೆಲವರು.
ಸದ್ಯ ಹಾಲಿ ಪಂಚಾಯತ್ ಉಪಾಧ್ಯಕ್ಷರ ಓಣಿಯಲ್ಲಿಯೇ ರಸ್ತೆ ಕೆಟ್ಟಿದ್ದು, ಈ ಕುರಿತು ಗ್ರಾಮದ ಅಭಿವೃದ್ಧಿಗೆ ಕ್ರಿಯಾ ಯೋಜನೆ ಆಗಿದ್ದರೂ, ಅನುಷ್ಠಾನಗೊಂಡಿಲ್ಲ. ಪಂಚಾಯತಿಯಲ್ಲಿ ಅಧ್ಯಕ್ಷೆ ಕೂಡ ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಏನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಗ್ರಾಮದ ಶುದ್ಧ ನೀರಿನ ಘಟಕ ಕೆಟ್ಟು 6 ತಿಂಗಳುಗಳೇ ಕಳೆದಿವೆ. ಸಂಬಂಧಪಟ್ಟ ಎಂಜಿನಿಯರ್ ಈ ಬಗ್ಗೆ ಇಂದಿಗೂ ತಲೆಕೆಡಿಸಿಕೊಂಡಿಲ್ಲ. ಫಿಲ್ಟರ್ ಮಷೀನಿನ ಸುತ್ತಲೂ ವಿದ್ಯುತ್ ಆವರಿಸಿಕೊಂಡಿದ್ದು, ಯಾರೂ ಒಳಗೆ ಹೋಗದ ವಾತಾವರಣ ಸೃಷ್ಟಿಯಾಗಿದೆ. ಚಿಕ್ಕ ಮಕ್ಕಳನ್ನು ಅತೀ ಜಾಗರೂಕತೆಯಿಂದ ಸ್ಥಳೀಯರು ನೋಡಿಕೊಳ್ಳುವ ಅನಿವಾರ್ಯತೆ ಬಂದಿದೆ. ಆದಷ್ಟು ಬೇಗ ರಿಪೇರಿ ಮಾಡಿಸಿ, ಸ್ಥಳಿಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯತ್ ಹಿರಿಯ ಸದಸ್ಯ ನಿಂಗಪ್ಪ ಯಲ್ಲಪ್ಪ ತೇಗೂರ್ ಹೇಳುತ್ತಾರೆ.
ಇದನ್ನು ಓದಿದ್ದೀರಾ? ಪ್ಯಾಲೆಸ್ತೀನ್ ಜನರಿಗಾಗಿ ಒಗ್ಗೂಡಿದ ಬೆಂಗಳೂರಿನ ಜನ
ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಯ ಬೇಜವಾಬ್ದಾರಿತನದಿಂದ ಈ ನೀರಿನ ಘಟಕ ಬಂದ್ ಆಗಿದೆ. ಸರಕಾರದ ಆಸ್ತಿ ಎಂದರೆ ಹೀಗೆಯೋ, ಏನೋ ಗೊತ್ತಾಗುತ್ತಿಲ್ಲ. ಸಾರ್ವಜನಿಕರಿಗೂ ಸದುಪಯೋಗ ಆಗುವುದಿಲ್ಲ ಎಂದರೆ, ಅಂತಹ ಯೋಜನೆಯನ್ನಾದರೂ ಜಾರಿ ಮಾಡುವುದೇಕೆ? ಈ ಮೊದಲು ರಿಪೇರಿ ಬಂದಾಗ, ಕಡಿಮೆ ಬೆಲೆಯ ಮೆಮರಿನ್ ಮೆಷಿನ್ ಹಾಕಿಸಿರುವ ಕಾರಣ, ಅದು ಹೆಚ್ಚು ಕಾಲ ಬಳಕೆಗೆ ಬರಲಿಲ್ಲ. ಅದಕ್ಕೇ ಹೊಸ ಬಿಲ್ ತೆಗೆದು ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲೆಯ ಎಲ್ಲ ಕಡೆಗೆ ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಿ, ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಮಾಡುತ್ತಾರೆಯೇ? ಕಾದುನೋಡಬೇಕಿದೆ.