ಬೆಳಗಾವಿಯ ಕಿತ್ತೂರಿನಲ್ಲಿ ಫೆ.21ರಂದು ‘ನಾನೂ ರಾಣಿ ಚೆನ್ನಮ್ಮ’ ರಾಷ್ಟ್ರೀಯ ಆಂದೋಲನಕ್ಕೆ ಚಾಲನೆ ಸಿಗಲಿದ್ದು, ಕಿತ್ತೂರಿನಲ್ಲಿ 21ರಂದು ಬೆಳಿಗ್ಗೆ 9 ಗಂಟೆಗೆ ಚನ್ನಮ್ಮ ಪ್ರತಿಮೆ ಸ್ಥಳದಿಂದ ಮೆರವಣಿಗೆ ಹೊರಡಲಿದೆ. 11 ಗಂಟೆಗೆ ಕೋಟೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಆಂದೋಲನ ವಿವಿಧೆಡೆ ಎರಡು ತಿಂಗಳು ನಡೆಯಲಿದೆ.
ರಾಣಿ ಚೆನ್ನಮ್ಮ ಸ್ವಾತಂತ್ರ್ಯದ ರಣಕಹಳೆಯನ್ನು 1824ರಲ್ಲಿ ಮೊಳಗಿಸಿ ಎರಡು ನೂರು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ದೇಶಾದ್ಯಂತ ರಾಣಿ ಚೆನ್ನಮ್ಮ ಅವರ ಪ್ರತಿರೋಧದ ವರ್ಷಾಚರಣೆಯನ್ನು ಮಾಡುವ ಬಗ್ಗೆ ಅನಹದ್ ಮತ್ತು ಎನ್.ಎಫ್.ಐ.ಡಬ್ಲು ಪರ್ಯಾಲೋಚಿಸಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದೊಂದಿಗೆ ಸೇರಿ, ಮಹಿಳಾ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಮ ಸಮಾಜಕ್ಕಾಗಿ ಹೋರಾಡುತ್ತಿರುವ ಅನೇಕ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಕಾರ್ಯಕ್ರಮ ನಡೆಸಲು ಒಟ್ಟುಗೂಡಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಜಂಟಿ ಸಂಘಟನೆಗಳು, ನಮ್ಮ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಸಂರಕ್ಷಿಸುವುದಕ್ಕಾಗಿ ಮತ್ತು ದ್ವೇಷ ಅಳಿಸಿ ಪ್ರೀತಿ ಬೆಳೆಸುವುದಕ್ಕಾಗಿ ಭಾರತದ ಎಲ್ಲಾ ಮೂಲೆಗಳಿಂದ ಮಹಿಳೆಯರು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೋರಾಟ ಮತ್ತು ಸಾಮಾಜಿಕ ಸಂಘಟನೆಯಲ್ಲಿ ನಿರತರಾಗಿರುವ ಅನೇಕ ಪ್ರಮುಖರು ಕಿತ್ತೂರಿನಲ್ಲಿ ನಡೆಯುವ ಜಾಥಾದಲ್ಲಿ ಭಾಗವಹಿಸುವರು. ಇಡೀ ಭಾರತದ ಮಹಿಳೆಯರು ಈ ಸಂದರ್ಭದಲ್ಲಿ “ಕಿತ್ತೂರು ಘೋಷಣೆಯನ್ನು” ಮೊಳಗಿಸಲಿದ್ದಾರೆ ಎಂದು ಹೇಳಿವೆ.
ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಸಿಡಿದೆದ್ದು ಪ್ರತಿರೋಧ ತೋರಿದ ಕಿತ್ತೂರು ರಾಣಿ ಚೆನ್ನಮ್ಮ 1778 ಅಕ್ಟೋಬರ್ 23 ರಂದು ಬೆಳಗಾವಿ ಸಮೀಪದ ಪುಟ್ಟಹಳ್ಳಿ ಕಾಕತಿಯಲ್ಲಿ ಧೂಳಪ್ಪಗೌಡರು-ಪದ್ಮಾವತಿ ದಂಪತಿಗಳಿಗೆ ಜನಿಸಿದರು. ಈಕೆಯ ತಂದೆ ಧೂಳಪ್ಪಗೌಡರು, ಚಿಕ್ಕವಯಸ್ಸಿನಲ್ಲೇ ಚೆನ್ನಮ್ಮನಿಗೆ ಕತ್ತಿವರಸೆ, ಕುದುರೆ ಸವಾರಿ ಮತ್ತು ಬಿಲ್ಲುವಿದ್ಯೆಗಳನ್ನು ಕಲಿಸಿದರು. ಕಿತ್ತೂರಿನ ರಾಜಮನೆತನದ ದೇಸಾಯಿ ಮಲ್ಲಸರ್ಜರೊಂದಿಗೆ 15ನೆಯ ವಯಸ್ಸಿನಲ್ಲಿ ವಿವಾಹ ನೆರವೇರಿಸಿದರು. ಈ ಮೊದಲೆ ಮಲ್ಲಸರ್ಜ ದೇಸಾಯಿ ಅವರಿಗೆ ರುದ್ರಮ್ಮ ಎಂಬಾಕೆಯೊಂದಿಗೆ ವಿವಾಹವಾಗಿ ಶಿವಲಿಂಗರುದ್ರಸರ್ಜ ಎಂಬ ಒಬ್ಬ ಮಗನಿದ್ದನು.
ರಾಜ ಮಲ್ಲಸರ್ಜ ದೇಸಾಯಿ ಅವರು 1816 ರಲ್ಲಿ ಮರಣಹೊಂದಿದರು. ಚೆನ್ನಮ್ಮನ ಮಗ ಅತೀ ಚಿಕ್ಕ ವಯಸ್ಸಿನಲ್ಲೇ 1824ರ ಮೊದಲ ಯುದ್ಧದಲ್ಲಿ ಸಾವಿಗೀಡಾದನು. ಹಿರಿಯ ಹೆಂಡತಿಯ ಮಗ ಶಿವಲಿಂಗರುದ್ರಸರ್ಜರಿಗೆ ಪಟ್ಟಕಟ್ಟಿದರು. ಆದರೆ ಅನಾರೋಗ್ಯದ ಕಾರಣ ಮಕ್ಕಳಿರದ ಆತ ಬಲುಬೇಗನೆ ಮರಣ ಹೊಂದಿದರು. ಅದಕ್ಕೂ ಮೊದಲೇ ಮುಂದಾಲೋಚನೆಯಿಂದ ಚೆನ್ನಮ್ಮ ಆತನಿಗೆ ಶಿವಲಿಂಗಸರ್ಜ ಎಂಬುವವರನ್ನು ದತ್ತು ಪಡೆಯುವಂತೆ ನೋಡಿಕೊಂಡಿದ್ದರು.
ಶಿವಲಿಂಗರುದ್ರಸರ್ಜ ಸಾವಿಗೀಡಾದ ಸಂದರ್ಭವನ್ನು ಕಾಯುತ್ತಿದ್ದ ಬ್ರಿಟಿಷರು ಕಿತ್ತೂರನ್ನು ಕಬಳಿಸಲು ಹೊಂಚು ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಕಿತ್ತೂರನ್ನು ಬ್ರಿಟಿಷರಿಂದ ರಕ್ಷಿಸುವ ಹೊಣೆಗಾರಿಕೆಯನ್ನು ರಾಣಿ ಚೆನ್ನಮ್ಮ ತೆಗೆದುಕೊಳ ಬೇಕಾಯಿತು. ಚೆನ್ನಮ್ಮ ದತ್ತು ಮೊಮ್ಮೊಗ ಶಿವಲಿಂಗಸರ್ಜನನ್ನು ಪಟ್ಟದಲ್ಲಿ ಕೂರಿಸಿದಾಗ ಹದ್ದಿನಂತೆ ಕಾಯುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ ಕಿತ್ತೂರನ್ನು ಕಬಳಿಸಲು ಧಾರವಾಡದಿಂದ ಶರಣಾಗುವಂತೆ ರಾಣಿ ಚೆನ್ನಮ್ಮನಿಗೆ ಮಿ.ಡಾಲ್ ಹೌಸಿ ಆರಂಭಿಸಿದ ದತ್ತೆಕ ನಿಷೇಧ (Doctrine of Lapse) ಪ್ರಕಾರ ಅದೇಶ ಕಳುಹಿಸಿತು.
ಇದನ್ನು ಸಹಿಸದ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಸೈನ್ಯವನ್ನು ಸಜ್ಜು ಮಾಡಿ ಬ್ರಿಟಿಷರ ಮೇಲೆ 1824 ರಲ್ಲಿ ಯುದ್ಧ ಮಾಡಿದಳು. ಯುದ್ಧದಲ್ಲಿ ಥ್ಯಾಕರೆಯನ್ನು ಕೊಂದು ಕಿತ್ತೂರು ಜಯಸಾಧಿಸಿತು. ರಾಣಿ ಚೆನ್ನಮ್ಮ ಬ್ರಿಟಿಷರ ವಸಾಹತುಶಾಹಿಯ ವಿರುದ್ಧ ಭಾರತದಲ್ಲಿ ಹೋರಾಡಿದ ಮೊಟ್ಟಮೊದಲ ಮಹಿಳಾ ಹೋರಾಟಗಾರರ ಪಟ್ಟಿಯಲ್ಲಿ ಬರುತ್ತಾಳೆ. ಕರ್ನಾಟಕದ ಜನಪದರಲ್ಲಿ ಅವರಿಗೆ ಸದಾ ಗೌರವ, ಅಭಿಮಾನದ ಸ್ಥಾನವಿದೆ. ವೀರರಾಣಿ ಎಂದೇ ಎಲ್ಲರೂ ಆಕೆಯನ್ನು ನೆನೆಯುತ್ತಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ರಾಣಿ ಚೆನ್ನಮ್ಮನಿಗೆ ಒಂದು ಸ್ಥಿರವಾದ ಸ್ಥಾನವಿದೆ. ನಿರ್ಭಯ ವೀರಾಗ್ರಣಿಯಾದ ಚೆನ್ನಮ್ಮ ಇಂದಿಗೂ ಸ್ವಾತಂತ್ರ್ಯಪ್ರಿಯಳಾಗಿ ಬ್ರಿಟಿಷರಿಗೆ ನೀಡಿದ ಪ್ರತಿರೋಧದ, ಆತ್ಮಗೌರವದ ಹೆಗ್ಗುರುತಾಗಿ ನಿಲ್ಲುತ್ತಾಳೆ.
ಕರ್ನಾಟಕದ ಹೆಮ್ಮೆಯ ರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಕೆಚ್ಚೆದೆಯ ಹೋರಾಟವನ್ನು ನೆನೆಯಲು ಮತ್ತು ಸ್ಫೂರ್ತಿ ಪಡೆಯಲು ಫೆ.21ರಂದು ಎಲ್ಲೆರೂ ಬೆಳಗಾವಿಯ ಕಿತ್ತೂರಿಗೆ ಬನ್ನಿ ಎಂದು ಸಂಘಟನೆಗಳು ಕರೆ ನೀಡಿವೆ.