ಉದ್ಯೋಗ ಖಾತರಿ ಯೋಜನೆ ಎಂದೇ ಜನಜನಿತವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(MGNREGA) ಅಡಿಯಲ್ಲಿ ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕವಾಗಿ 100 ದಿನಗಳ ಕೂಲಿ ಉದ್ಯೋಗವನ್ನು ಖಾತರಿಪಡಿಸುತ್ತದೆ. ಆದರೆ ಹಲವಾರು ಕಡೆ ಕೆಲಸವಿಲ್ಲದೆ ಕೂಲಿಕಾರರು ಪರದಾಡುವ ಪರಿಸ್ಥಿತಿ ಬಂದೊದಗಿದೆ.
ವರ್ಷಕ್ಕೆ 100 ದಿನಗಳ ಕೆಲಸವನ್ನೂ ನೀಡದೆ, ಮಾಡಿದ ಕೆಲಸಕ್ಕೆ ಕೂಲಿಯನ್ನೂ ನೀಡದೆ ಅದೆಷ್ಟೊ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರನ್ನು ಸತಾಯಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಲಕನಕೊಪ್ಪ ಗ್ರಾಮದ ಕೂಲಿ ಕಾರ್ಮಿಕರಿಗೆ ಕಳೆದ 1 ವರ್ಷದಿಂದ ಕೂಲಿ ಉದ್ಯೋಗ ನೀಡದೆ, ಕೆಲಸ ಕೊಟ್ಟರೂ ಸೊನ್ನೆ ಹಾಜರಿ ತೋರಿಸುವ ವಾತಾವರಣ ಸೃಷ್ಟಿಯಾಗಿದೆ.
“ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು 2005ರಲ್ಲಿ ಜಾರಿಗೆ ತರಲಾಯಿತು. ಇದನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಯೋಜನೆ(MGNREGA) ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಹಣಕಾಸು ವರ್ಷದಲ್ಲಿ 13.32 ಕೋಟಿ ಕಾರ್ಮಿಕರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆಂದು ಹೇಳುತ್ತಾರೆ. ಇತ್ತ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದ ಕೂಲಿ ಕಾರ್ಮಿಕರು ಕಳೆದ ಒಂದು ವರ್ಷದಲ್ಲಿ 100 ದಿನಗಳ ಕೆಲಸವನ್ನೂ ಕೊಟ್ಟಿಲ್ಲ. ಎನ್‌ಎಂಆರ್ ಕೊಟ್ಟರೂ ಸೊನ್ನೆ ಹಾಕಿದ್ದಾರೆಂದು ಆರೋಪಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಒಟ್ಟು 30-40 ಕೂಲಿಕಾರರಿದ್ದಾರೆ. 7 ದಿನ ಕೂಲಿ ಮಾಡಿದರೆ; 3-4 ದಿನದ ಕೂಲಿ ಹಾಕಿ ಕೊಡುತ್ತಿದ್ದಾರೆ” ಎಂದು ಆಕ್ರೋಶಗೊಂಡಿದ್ದಾರೆ.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನಿರ್ಮಲಾ ಜಾಲಿಹಾಲ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ ಒಂದು ವರ್ಷದಿಂದ ಕೂಲಿ ಕಾರ್ಮಿಕರಿಗೆ ಸರಿಯಾಗಿ ಪೇಮೆಂಟ್ ಕೊಟ್ಟಿಲ್ಲ. ರೈತರು ತಕರಾರು ಮಾಡಿದ್ದಾರೆಂದು ಗ್ರಾಮ ಪಂಚಾಯಿತಿಯವರು ನಮಗೆ ಕೆಲಸ ಕೊಡುತ್ತಿಲ್ಲ. ಕಲ್ಲುಗುಡ್ಡದಲ್ಲಿ ಕೆಲಸ ಕೊಟ್ಟು ಹಾಜರಿಗೆ ₹180 ಹಾಕಿಕೊಟ್ಟಿದ್ದಾರೆ. ಉಳಿದ ಹಣವನ್ನು ಯಾರು ಗುಳುಂ ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ನಮ್ಮೂರಿನಲ್ಲೇ(ಮಲಕನಕೊಪ್ಪ) 4 ಮಂದಿ ಗ್ರಾ.ಪಂ. ಸದಸ್ಯರಿದ್ದಾರೆ. ಅದರೂ ಕೂಡಾ ಕೂಲಿಕಾರರ ಪರವಾಗಿ ನಿಲ್ಲುವುದಿಲ್ಲ. ದ್ಯಾವನಕೊಂಡು ಗ್ರಾಮದಲ್ಲಿ ಕೆಲಸ ಶುರು ಮಾಡಿದ್ದಾರೆ. ಆದರೆ; ಅಲ್ಲಿ ಒಬ್ಬ ಕೂಲಿಕಾರರೂ ಇಲ್ಲ. ವಾರಕ್ಕೊಮ್ಮೆ ಎನ್‌ಎಂಆರ್ ಕೊಡುವುದಿಲ್ಲ. ಕೂಲಿ ಉದ್ಯೋಗದ ಜಾಗದಲ್ಲಿ ಕಾರ್ಮುಕರಿಗೆ ಕುಡಿಯಲು ನೀರಿನ ವ್ಯವಸ್ಥೆಯೂ ಮಾಡುವುದಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಯಾರೂ ಸಕ್ರಿಯವಾಗಿ ಕಾರ್ಯನಿರ್ವಹಿಸುವುದಿಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
“ಕಳೆದ ಒಂದು ವರ್ಷದಿಂದ ಸೊನ್ನೆ ಹಾಜರಿ ಹಾಕಿಕೊಟ್ಟಿದ್ದು, ಕೇಳಲು ಹೋದರೆ; ಪಂಚಾಯಿತಿ ಸಿಬ್ಬಂದಿ ಅಥವಾ ಅಧಿಕಾರಿಗಳು ಸಮಾಧಾನ ಹೇಳಿ ಕಳುಹಿಸುತ್ತಾರೆ. ಈ ಬಗ್ಗೆ ತಾಲೂಕು ಪಂಚಾಯಿತಿ ಮೆಟ್ಟಿಲೇರಿದರೂ ಪ್ರಯೋಜನವಾಗಿಲ್ಲ. ಬಡವರ ನೋವಿನ ಧ್ವನಿಗೆ ಸಾಂತ್ವನ ಹೇಳುವವರಿಲ್ಲ. ಪಂಚಾಯಿತಿಗೆ ಭೇಟಿಕೊಟ್ಟಾಗೆಲ್ಲ ಬಹುತೇಕ ಬಾರಿ ಅಟೆಂಡರ್ ಬಿಟ್ಟರೆ, ಬೇರೆ ಯಾರೂ ಇರುವುದಿಲ್ಲ. ಒಂದು ವರ್ಷದಿಂದ ಕೂಲಿಕಾರರಿಗೆ ಸರಿಯಾಗಿ ಪಗಾರ ಕೊಟ್ಟಿಲ್ಲ. ವರ್ಷದಲ್ಲಿ 100 ದಿನಗಳು ಕೆಲಸ ಕೊಡಬೇಕೆಂದು ಹೇಳುತ್ತಾರೆ. ಆದರೆ 35 ದಿನಗಳ ಕೂಲಿ ಕಡಿತಗೊಳಿಸಿದ್ದಾರೆ” ಎಂದು ರುದ್ರಮ್ಮ ಆರೋಪಿಸುತ್ತಾರೆ.
“ನಮ್ಮ ನೋವನ್ನು ಯಾರಿಗೆ ಹೇಳುವುದು? ಇನ್ನು ಜಿಲ್ಲಾ ಪಂಚಾಯತ್‌ಗೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಉಪಯೋಗವೂ ಆಗಿಲ್ಲ. ಕೆಲಸ ಕೇಳಿದರೆ ಎಂಜಿನಿಯರ್‌ಗಳ ಸಮಸ್ಯೆ ಇದೆ ಅಂತ ಹೇಳಿ ಸಮಾಧಾನಗೊಳಿಸಿದರು. ಏನೇಯಾದರೂ ನಮಗೆ ಕೂಲಿ ಉದ್ಯೋಗ ಬೇಕೆಬೇಕು. ಜಿನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲಕನಕೊಪ್ಪ ಮತ್ತು ತಾವರಗೇರಿ ಎರಡು ಗ್ರಾಮಗಳು ಒಳಪಡುತ್ತವೆ. ಮಲಕನಕೊಪ್ಪ ಗ್ರಾಮದಲ್ಲಿಯೇ 40 ಜನ ಕೂಲಿ ಕಾರ್ಮಿಕರಿದ್ದೇವೆ. ನಾವೇನು ಹೊಲ ಉಳ್ಳವರಲ್ಲ. ನಮಗೆ ಇದ್ದೂರಿನಲ್ಲೇ ಕೆಲಸ ಕೊಡಬೇಕು. ಮಲಕನಕೊಪ್ಪದಿಂದ ಕಲ್ಲುಗುಡ್ಡವು 3 ಕಿಮೀ ದೂರದಲ್ಲಿದೆ. ಅಲ್ಲಿಯವರೆಗೂ ನಡೆದುಕೊಂಡು ಹೋಗಿಯೇ ಕೂಲಿ ಮಾಡಿದ್ದೇವೆ. ಆದರೆ; ದಿನಕ್ಕೆ ₹180 ಮಾತ್ರ ಕೊಟ್ಟಿದ್ದಾರೆ. ನಮ್ಮ ಕೂಲಿ ಕೆಲಸಕ್ಕೆ ಬೆಲೆಯೇ ಇಲ್ಲದಂತಾಗಿದೆ” ಎಂದು ಕೂಲಿಕಾರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಇದನ್ನು ಓದಿದ್ದೀರಾ? ಹೊಸಪೇಟೆ | ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯ: ಎಸ್‌ಎಫ್‌ಐಯಿಂದ ಪ್ರತಿಭಟನಾ ಧರಣಿ
ಇನ್ನು ಇದೇ ತಾಲೂಕಿನ ಶಿವನಪುರ ಗ್ರಾಮಸ್ಥರು ಜುಲೈ 17ರಂದು ಬೆಲವಂತರ ಗ್ರಾಮ ಪಂಚಾಯತ್ ಎದುರಿಗೆ ಕೂಲಿ ಕೆಲಸಕ್ಕಾಗಿ ಪ್ರತಿಭಟನೆ ನಡೆಸಿದರು. ಇದ್ದಲ್ಲಿಯೇ 100 ದಿನ ಕೆಲಸ ಕೊಡಬೇಕು. ಒಂದುವೇಳೆ ಕೆಲಸ ಕೊಡದಿದ್ದರೆ; ತಾಲೂಕು ಪಂಚಾಯತ್‌ಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.
ಕೂಲಿಕಾರ್ಮಿಕ ಮಹಿಳೆಯರು ಮಾತನಾಡಿ, “ಕೂಲಿ ಕೇಳಿಕೊಂಡು ಪಂಚಾಯಿತಿಗೆ ಬಂದರೆ; ಪಿಡಿಒ ಬೇರೆ ಸಭೆಯಲ್ಲಿದ್ದೇನೆಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ನಮಗೆ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ದೂರದ ಊರಿಗೆ ಹೋಗಲು ಆಗುವುದಿಲ್ಲ. ನಾವು ಹೊಲ ಇದ್ದವರಲ್ಲ. ಹೀಗಾಗಿ ನಮಗೆ ಇದ್ದಲ್ಲಿಯೇ ಕೆಲಸ ಬೇಕೆಬೇಕು. ಒಂದು ವರ್ಷವಾದರೂ ನಮಗೆ ಕೆಲಸ ಕೊಡದೆ ಸತಾಯಿಸುತ್ತಿದ್ದಾರೆ. ನಾವು ಬಂದಾಗೊಮ್ಮೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಇರುವುದಿಲ್ಲ. ಕೆಲಸ ಕೇಳಿ ಬಂದರೆ, ಎನ್‌ಎಂಆರ್ ಕೇಳಿದಾಗೊಮ್ಮೆ ಸರ್ವರ್ ಸಮಸ್ಯೆ ಇದೆಯೆಂದು ಬೈದು ವಾಪಸ್ ಕಳುಹಿಸುತ್ತಾರೆ. ಬೆಲವಂತರ ಗ್ರಾಮದಿಂದ ಶಿವನಾಪುರ 2 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನಡೆದುಕೊಂಡೇ ನಾವೆಲ್ಲ ಕೆಲಸ ಕೇಳೋಕೆ ಬರಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳಿಗೆ ಯುವ ಸ್ಪಂದನ ಅರಿವು ಕಾರ್ಯಕ್ರಮ
ಈ ದಿನ.ಕಾಮ್ ಜಿನ್ನೂರ ಪಂಚಾಯಿತಿಗೆ ಬೇಟಿ ನೀಡಿದ ವೇಳೆಯೂ ಕಾರ್ಯಾಲಯದಲ್ಲಿ ಯಾರೊಬ್ಬರೂ ಇಲ್ಲದಿರುವುದು ಗಮನಕ್ಕೆ ಬಂದಿತು. ಕನಿಷ್ಟಪಕ್ಷ ಕ್ಲರ್ಕ್ ಸಹಿತ ಇಲ್ಲದಿರುವುದನ್ನು ಸ್ಥಳೀಯರಲ್ಲಿ ಕೇಳಿದಾಗ; “ಯಾರೊಬ್ಬರೂ ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ. ಅಧಿಕಾರಿಗಳುಗಳು ಯಾವ ಸಮಯಕ್ಕೆ ಪಂಚಾಯಿತಿ ಕಾರ್ಯಾಲಯದಲ್ಲಿ ಇರುತ್ತಾರೆ ಎಂಬುದೂ ನಮಗೆ ತಿಳಿಯುತ್ತಿಲ್ಲ” ಎನ್ನುತ್ತಾರೆ.
ಈ ದಿನ.ಕಾಮ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿದಾಗ; ಕರೆ ಸ್ವೀಕರಿಸಿರುವುದಿಲ್ಲ. ಹೀಗಾದರೆ ಗ್ರಾಮೀಣ ಕೂಲಿ ಕಾರ್ಮಿಕರ ಬದುಕಿನ ಗತಿಯೇನು? ಯಾರು ಹೊಣೆ? ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಿದೆ.
