ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ ಸಾರ್ವಜನಿಕರೂ ಉಪಯೋಗವಿಲ್ಲ. ಅತ್ತ ಸರ್ಕಾರಕ್ಕೂ ಲಾಭವಿಲ್ಲ ಎಂಬಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ ಸಂಪೂರ್ಣ ಪಾಳುಬಿದ್ದಿದ್ದು, ಈ ಕುರಿತು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ರೈತರಿಗೆ ಅನುಕೂಲವಾಗಬೇಕಿದ್ದ ಎಪಿಎಂಸಿ ಪ್ರಾಂಗಣ ಹಲವು ಅನೈತಿಕ ಚಟುವಟಿಕೆಗಳ ತಾಣವಾಗಿ, ಮಲ ಮೂತ್ರ ವಿಸರ್ಜನೆಯ ಜಾಗೆಯಾಗಿ ಮಾರ್ಪಟ್ಟಿದೆ.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸಮಶಿ ಗ್ರಾಮದ ಎಪಿಎಂಸಿ ಕಳೆದ ಹತ್ತು ವರ್ಷಗಳಿಂದ ಪಾಳುಬಿದ್ದಿದೆ. ಕಳೆದ 5 ವರ್ಷಗಳ ಹಿಂದೆ ನಿರ್ಮಾಣಗೊಂಡ 500 ಮೆಟನ್ ಸಾಮರ್ಥ್ಯದ ಗೋದಾಮು ಕೂಡಾ ಉದ್ಘಾಟನೆಯಾಗದೆ, ರೈತರಿಗೂ ಉಪಯೋಗವಾಗದೆ ಖಾಲಿ ಉಳಿದಿದೆ.
ರೈತರಿಗೆ ಅಥವಾ ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ನಿರ್ಮಾಣಗೊಂಡ 6 ವಾಣಿಜ್ಯ ಮಳಿಗೆಗಳೂ ಉದ್ಘಾಟನೆಗೊಂಡಿಲ್ಲ. ಇತ್ತ ಹಾಳುಬಿದ್ದಿರುವ ಎಪಿಎಂಸಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ರೈತರು ಕಣ ಮಾಡಿಕೊಳ್ಳಲು ಮತ್ತು ಇನ್ನಿತರೆ ಕೃಷಿ ಚಟುವಟಿಕೆಗೆ ದಾರಿ ಮಾಡಿಕೊಡಲೂ ಸಂಬಂಧಿಸಿದವರು ಮುಂದೆ ಬರುತ್ತಿಲ್ಲ. ಸದ್ಯ ಎಪಿಎಂಸಿ ದನ, ಕರು ಮೇಯಿಸಲು ಉಪಯೋಗವಾಗುತ್ತಿದೆ. ಗಿಡ ಗಂಟಿ ಬೆಳೆದು ಸಾರ್ವಜನಿಕರು ಕಾಲಿಡದಂತ ವಾತಾವರಣ ಸೃಷ್ಟಿಯಾಗಿದೆ.

ಹೀಗೆ ಯಾರಿಗೂ ಉಪಯೋಗವಾಗದೆ ಹಾಳುಬಿದ್ದಿರುವ ಎಪಿಎಂಸಿಯನ್ನು ರೈತರಿಗೆ ಕಣ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಅಥವಾ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯುವ ವಾರದ ಸಂತೆಯನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು, ರೈತರು, ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಸಂತೆಯನ್ನು ಸ್ಥಳಾಂತರಿಸಲು ಇನ್ನು ಕೆಲವರು ನಿರಾಕರಿಸುತ್ತಿದ್ದಾರೆ. ಊರಿನ ಮದ್ಯಭಾಗದಿಂದ ಸಂತೆಯನ್ನು ಕಿತ್ತು ಎಪಿಎಂಸಿ’ಗೆ ಸ್ಥಳಾಂತರಿಸಿದರೆ; ವೃದ್ಧರಿಗೆ, ಹೆಣ್ಣುಮಕ್ಕಳಿಗೆ ತೊಂದರೆ ಉಂಟಾಗುತ್ತದೆ ಎನ್ನುತ್ತಿದ್ದಾರೆ. ಎಲ್ಲ ಕಡೆಯಿಂದ ಗೊಂದಲಕ್ಕೆ ಸಿಲುಕಿರುವ ಎಪಿಎಂಸಿ ಯಾರಿಗಾದರೂ ಪ್ರಯೋಜನವಾಗಲಿ ಎಂಬುದು ಸಾರ್ವಜನಿಕರ ಆಶಯ. ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನೀಡಿದರೆ, ಗೋದಾಮು ಶರುಮಾಡಿದರೆ ಅಥವಾ ಕಣ, ಸಂತೆ ಮಾಡಲು ಅವಕಾಶ ಕಲ್ಪಿಸಿದರೆ ಏನೇ ಸಾರ್ವಜನಿಕ ಚಟುವಟಿಕೆ ನಡೆದರೂ ಅದರ ಎಲ್ಲ ಲಾಭ ಸರ್ಕಾರಕ್ಕೆ ಸಲ್ಲುತ್ತದೆ ಎನ್ನುತ್ತಾರೆ ರೈತರೊಬ್ಬರು.
ಈ ಕುರಿತು ರೈತರ ಸಂಘದ ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ, “ಕುಂದಗೋಳ ತಾಲೂಕಿನಲ್ಲೇ ಸಂಶಿ ದೊಡ್ಡ ಗ್ರಾಮವಾಗಿದೆ. ಸ್ಥಳೀಯವಾಗಿ ಕೃಷಿಯೇ ಮೂಲ ಕಸುಬಾಗಿದೆ. ರೈತರು ಹೆಚ್ಚಿರುವುದರಿಂದ ರೈತರಿಗೆ ಅನುಕೂಲವಾಗಲಿ ಎಂದು ಕಟ್ಟಿಸಿದ ಗೋದಾಮು, ವಾಣಿಜ್ಯ ಮಳಿಗೆ ಸರ್ವನಾಶದ ಹಾದಿ ಹಿಡಿದಿದೆ. ಉಗ್ರಾಣ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಬೇಕು ಎಂದು ಹಲವು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೇಲಿನ ಮಾತಿಗೆ ನಾವು ರೈತರ ಪರ ಮತ್ತು ರೈತರೇ ದೇಶದ ಬೆನ್ನೆಲುಬು ಎಂದು ವೇದಿಕೆಗೆ, ಪ್ರಚಾರ ಗಿಟ್ಟಿಸಿಕೊಳ್ಳಲು ಭಾಷಣ ಮಾಡುತ್ತಾರೆ. ಆದರೆ, ರೈತರಿಗೆ ಅನುಕೂಲವಾಗುವ ಯಾವುದೇ ಕಾರ್ಯ ಮಾಡುವುದಿಲ್ಲ. ರೈತರೆಂದರೆ ಅವರಿಗೆ ನಿರ್ಲಕ್ಷ್ಯ. ಹೀಗಾಗಿ ಎಪಿಎಂಸಿ ಹಾಳುಬಿದ್ದಿದೆ. ಇನ್ನು ವಾರದ ಸಂತೆಗೆ ಅನುಕೂಲ ಮಾಡಿಕೊಟ್ಟರೂ ಯಾವ ಅಭ್ಯಂತರವೂ ಇಲ್ಲ” ಎಂದರು.

ಗ್ರಾಮದ ಬೆಳೆ ರಕ್ಷಕ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ದ್ಯಾವನೂರ ಮಾತನಾಡಿ, ಕುಂದಗೋಳ ತಾಲೂಕಿನಲ್ಲಿಯೇ ಅತಿ ಹೆಚ್ಚು ರೈತರನ್ನು ಹೊಂದಿರುವ ಸಂಶಿ ಗ್ರಾಮದಲ್ಲಿ ರೈತರಿಗಾಗಿ ಇರುವ ಎಪಿಎಂಸಿ ಅನ್ನು ಉಳಿಸಿಕೊಡಲು ಯಾರೂ ಮುಂದೆ ಬರುತ್ತಿಲ್ಲ. ಸುಮಾರು 20-30.000 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ, 20 ವರ್ಷದ ಹಿಂದೆ ರೈತರು ಇಗೆ ಅನುಕೂಲ ಮಾಡುತ್ತೇವೆ ಎಂದು ಸರ್ಕಾರವು ಜಾಗೆ ಖರೀದಿ ಮಾಡಿತು. ತದನಂತರ ಒಂದು ಸಣ್ಣ ಕಚೇರಿಯನ್ನೂ ನಡೆಸಿದರು. ಅದು ಕೆಲದಿನ ಮಾತ್ರ ನಡೆದು ನಂತರ ಮುಚ್ಚಿದರು. ಈ ರೀತಿ ಜನರ ದುಡ್ಡನ್ನು ಹಾಳು ಮಾಡಿದ್ದಾರೆ. ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಫಕ್ಕೀರಪ್ಪ ಪೂಜಾರ ಮಾತನಾಡಿ, ಪಾಳುಬಿದ್ದ ಎಪಿಎಂಸಿಯನ್ನು ಸರಿಪಡಿಸಲು ಅನೇಕ ಸಲ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಹಿಂದೆ ರೈತರೆಲ್ಲ ಒಟ್ಟುಗೂಡಿ ತಾಲೂಕು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿದಾಗ ಕಸ, ಗಿಡ ಗಂಟಿಯನ್ನು ತೆಗೆಸಿದ್ದಾರೆ. ಉಗ್ರಾಣವನ್ನಾದರೂ ಮಾಡಿಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ. ಇನ್ನು ಇದೇ ಜಾಗೆಯಲ್ಲಿ ಪ್ರತಿವಾರ ನಡೆಯುವ ಸಂತೆಯನ್ನು ಸ್ಥಳಾಂತರ ಮಾಡಲು ಅನೇಕರು ಅಭಿಲಾಷೆ ಪಡುತ್ತಿದ್ದಾರೆ. ಇಲ್ಲಿಯೇ ಸಂತೆ ನಡೆಸುತ್ತೇವೆ ಎಂದು ಯಾರೇ ಬಂದರೂ ನಾವೂ ಅವರ ಪರ ಕೈಜೋಡಿಸುತ್ತೇವೆ. ಒಟ್ಟಾರೆಯಾಗಿ ಹಾಳುಬಿದ್ದು ಹೊರಟಿರುವ ಎಪಿಎಂಸಿಯು ಸದುಪಯೋಗವಾಗಲಿ ಎಂದು ಹೇಳಿದರು.
ಬಸವರಾಜ ಅಂಗಡಿ ಮಾತನಾಡಿ, ಪಾಳು ಬಿದ್ದಿರುವ ಎಪಿಎಂಸಿ ಜಾಗೆಯಲ್ಲಿ ಕಾಲಿಡಲೂ ಸ್ಥಳವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂತೆ ನಡೆಸುವುದು ಕಷ್ಟವಾಗುತ್ತದೆ. ಕನಿಷ್ಠ ಪಕ್ಷ ಸ್ವಚ್ಚಗೊಳಿಸಿ, ಸಣ್ಣ ಪುಟ್ಟ ಅಂಗಡಿಗಳನ್ನು ಕಟ್ಟಿಸಿದರೆ ಒಳ್ಳೆಯದು. ಉಗ್ರಾಣ ಕಟ್ಟಿಸಿ ಯಾವುದಕ್ಕೂ ಉಪಯೋಗವಾಗದೆ ಹಾಳುಗೆಡವಿದ್ದಾರೆ. ಕ್ಲೀನ್ ಮಾಡಿಸಿದರೆ ನಮ್ಮೂರಿನ ರೈತರಿಗೆ ಪ್ರಯೋಜನವಾಗುತ್ತದೆ ಎಂದರು.
ಮಹದೇವಪ್ಪ ಹೊನ್ನಳ್ಳಿ ಮಾತನಾಡಿ, ಗ್ರಾಮದ ಚಾಕಲಬ್ಬಿ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ಸಂತೆಯನ್ನು ನಡೆಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಮತ್ತು ಗ್ರಾಮದ ಮಧ್ಯೆ ನಡೆಯುತ್ತಿರುವ ಸಂತೆಯಲ್ಲಿ ಬಹಳ ಸಮಸ್ಯೆ ಉಂಟಾಗುತ್ತವೆ. ಓಡಾಡಲು ಜಾಗೆಯಿಲ್ಲ. ಗಾಡಿಗಳನ್ನು ನಿಲ್ಲಿಸಲು ಜಾಗವಿಲ್ಲ. ಹೀಗಾಗಿ ಸಂತೆಯನ್ನು ಸ್ಥಳಾಂತರ ಮಾಡಬೇಕು. ಇನ್ನು ಈಗಾಗಲೇ ನಡೆಯುತ್ತಿರುವ ಸಂತೆ ಮಾರ್ಕೆಟ್‌ನಲ್ಲಿ ಇರುವ ವ್ಯಾಪಾರಸ್ಥರು ಅಲ್ಲಿಂದ ಸಂತೆ ಕಿತ್ತು ಬೇರೆಡೆಗೆ ಸಾಗಿಸಲು ಒಪ್ಪಿಗೆ ಕೊಡುವುದಿಲ್ಲ. ಏನೇ ಇದ್ದರೂ ಎಪಿಎಂಸಿ ಹಾಳಾಗಾದರೆ ಸದುಪಯೋಗ ಆಗಬೇಕಾದರೆ, ಸಂತೆಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ
ಈ ಕುರಿತು ಕುಂದಗೋಳ ಎಪಿಎಂಸಿ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಸಂಶಿ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತರಲಾಗಿದ್ದು, “ಆ ಬಗ್ಗೆ ನಾನೂ ತಿಳಿದುಕೊಳ್ಳಬೇಕಿದೆ. ಅನಂತರ ಯೋಚಿಸಲಾಗುವುದು” ಎಂದು ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಬಹುತೇಕರು ಗ್ರಾಮದ ವಾರದ ಸಂತೆ ಇಲ್ಲಿಗೆ ಸ್ಥಳಾಂತರವಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಹಾಳುಬಿದ್ದ ಎಪಿಎಂಸಿ ರೈತರಿಗೆ, ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಅಥವಾ ಸಂತೆ ನಡೆಸಲಾದರೂ ಸ್ವಚ್ಛಗೊಳಿಸಿ ಅನುಕೂಲ ಮಾಡಿಕೊಡಬೇಕು. ಮತ್ತು ಉದ್ಘಾಟನೆಗೊಳ್ಳದ ಗೋದಾಮನ್ನು ಉಗ್ರಾಣ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರೈತರು, ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.