ಪೆಟ್ರೊಲ್ ಬೆಲೆ ಹೆಚ್ಚಳದ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ನಿರಂತವಾಗಿ ಬೆಲೆ ಏರಿಸಿ, ಈಗ ಪ್ರತಿಭಟಿಸುತ್ತಿರುವ ಬಿಜೆಪಿಗರಿಗೆ ನಾಚಕೆಯಾಗಬೇಕು. ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿರುವ ಗಂಗಾವತಿ ಶಾಸಕ, ಅಯೋಗ್ಯ ಜನಾರ್ದನ ರೆಡ್ಡಿ ಕೂಡಲೇ ಕ್ಷಮೆ ಕೇಳಬೇಕೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ತೈಲ ಬೆಲೆ ಹೆಚ್ಚಳ ಬಗ್ಗೆ ಬಿಜೆಪಿಯವರು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವುದರಲ್ಲಿ ನ್ಯಾಯವಿದೆ. ಆದರೆ, ಮುಖ್ಯಮಂತ್ರಿಗಳ ಬಗ್ಗೆ ಕೆಟ್ಟ ಪದ ಬಳಕೆ ಮಾಡುವುದು ಸರಿಯಲ್ಲ. ತೈಲ ಬೆಲೆ ಹೆಚ್ಚಳದ ಬಗ್ಗೆ ಬೀದಿಗಿಳಿದು ಹೋರಾಟ ಮಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮೋದಿ ಆಡಳಿತಾವಧಿಯಲ್ಲಿ ತೈಲ ಹಾಗೂ ಅಡುಗೆ ಅನಿಲ ಬೆಲೆ ವಿಪರೀತ ಹೆಚ್ಚಳ ಮಾಡಿದ್ದನ್ನು ಅವರು ನೆನಪಿಸಿಕೊಳ್ಳಲಿ. 10 ವರ್ಷಗಳಿಂದ ಬಾಯಿ ಮುಚ್ಚಿಕೊಂಡಿದ್ದವರು ಇವಾಗ ಮಾತನಾಡುತ್ತಿದ್ದಾರೆ. ಆಗ ಯಾಕೆ ಮಾತನಾಡಲಿಲ್ಲ” ಎಂದು ಕಿಡಿಕಾರಿದ್ದಾರೆ.