ಆಸ್ತಿಗಾಗಿ ತಂದೆ, ತಾಯಿಯನ್ನು ಮಗ ಭೀಕರವಾಗಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶಾರವ್ವ ಮತ್ತು ಅಶೋಕ ಕೊಬ್ಬನ್ನವರ ಕೊಲೆಯಾದ ದಂಪತಿ. ಗಂಗಾಧರ ಕೊಲೆಗೈದ ಮಗ ಎಂದು ತಿಳಿದು ಬಂದಿದೆ.
ಆಸ್ತಿ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಎರಡು ದಿನಗಳಿಂದ ಜಗಳ ನಡೆದಿತ್ತು. ಅದು ತಾರಕ್ಕೇರಿದ ಪರಿಣಾಮ ಕೋಪದಲ್ಲಿ ತಂದೆ, ತಾಯಿಯನ್ನು ಮಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕೂಡಲೇ ಸ್ಥಳೀಯರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹಗಳು ಕಿಮ್ಸ್ ಶವಾಗಾರಕ್ಕೆ ಸಾಗಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕೊಲೆಗೈದ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.