ಉತ್ತರ ಕರ್ನಾಟಕ ಭಾಗದ ಜನರಿಗೆ ಜೀವನಾಡಿಯಂತೆ ಕಂಡಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವರನ್ನು ನಿಯಂತ್ರಿಸುವುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನಾಯಿಗಳ ಹಾವಳಿ ತಡೆಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಪೌರಾಯುಕ್ತರಿಗೆ ದೂರು ನೀಡಿದ್ದಾರೆ.
ಕಳೆದ ಕೆಲವು ತಿಂಗಳಿಂದ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಕಿಮ್ಸ್ ಅಧಿಕಾರಿಗಳು ಪೌರಾಯುಕ್ತರೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಆದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಕಿಮ್ಸ್ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿದ್ದರು. ಆಗಲೂ ಆಧಿಕಾರಿಗಳು ಸಂದರ್ಭದಲ್ಲಿ ಅಧಿಕಾರಿಗಳು ಎಚ್‌ಡಿಎಂಸಿ ಅಧಿಕಾರಿಗಳಿಗೆ ನಾಯಿಗಳ ಹಾವಳಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಶೀಘ್ರದಲ್ಲೇ ನಾಯಿಗಳನ್ನು ಸ್ಥಳಾಂತರಿಸುವುದಾಗಿ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ಕಿಮ್ಸ್ ಆವರಣದಲ್ಲಿ 25ಕ್ಕೂ ಹೆಚ್ಚು ಬೀದಿ ನಾಯಿಗಳು ಬೀಡುಬಿಟ್ಟಿವೆ. ಆಸ್ಪತ್ರೆಗೆ ಬರುವವರಿಗೆ ಅಪಾಯ ತಂದೊಡ್ಡುತ್ತಿವೆ. ಮಾತ್ರವಲ್ಲ, ಕೆಲವೊಮ್ಮೆ ವಾರ್ಡ್‌ಗಳಿಗೂ ನುಗ್ಗುತ್ತವೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಬರುವ ಜನರು ಬೀದಿನಾಯಿಗಳ ದಾಳಿಯ ಭೀತಿಯಲ್ಲಿದ್ದಾರೆ. ವಾರ್ಡ್‌ಗಳಿಂದ ಹೊರ ಬರಲು ಹೆದರುತ್ತಿದ್ದಾರೆ. ನಾವು ನಾಯಿಗಳನ್ನು ಓಡಿಸುತ್ತೇವೆ. ಆದರೆ, ಅವು ಮತ್ತೆ ಬರುತ್ತವೆ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
“ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಸಮಸ್ಯೆಯನ್ನು ಪೌರಾಯುಕ್ತರ ಗಮನಕ್ಕೆ ತರಲಾಗಿದೆ. ನಾವು ಪತ್ರ ಬರೆದಾಗ ಅಥವಾ ಕಂಟ್ರೋಲ್ ರೂಂಗೆ ದೂರು ನೀಡಿದಾಗ ಅಧಿಕಾರಿಗಳು ಬೀದಿ ನಾಯಿಗಳನ್ನು ಓಡಿಸುತ್ತಾರೆ. ಆದರೆ, ಅವುಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ನಾವು ಮನವಿ ಮಾಡಿದ್ದೇವೆ” ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಲಿಂಗಪ್ಪ ಹೇಳಿದ್ದಾರೆ.