ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಮುಂದಾಗಿರುವ ಹು-ಧಾ ಮಹಾನಗರ ಪೊಲೀಸರು, ನ.21ರಂದು 172 ರೌಡಿಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಕಮಿಷನರ್ ರೇಣುಕಾ ಸುಕುಮಾರ, ಡಿಸಿಪಿ ರಾಜೀವ ಎಂ. ಮಾರ್ಗದರ್ಶನದಲ್ಲಿ ಉತ್ತರ, ದಕ್ಷಿಣ ಮತ್ತು ಧಾರವಾಡ ವಿಭಾಗದ ಎಸಿಪಿ, ಇನ್ಸ್ಪೆಕ್ಟರ್‌ಗಳ ನೇತೃತ್ವದ ತಂಡ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು.
ಕೆಲವು ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಕೆಲವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಬೆಂಡಿಗೇರಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಷಣ್ಮುಖ ಗುಡಿಹಾಳ ಮನೆಯಲ್ಲಿ ಪರಿಶೀಲನೆ ವೇಳೆ, ಮಾರಕಾಸ್ತ್ರಗಳು ದೊರೆತಿದ್ದು, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೌಡಿಗಳಾದ ರಾಘವೇಂದ್ರ ಧರ್ಮದಾಸ, ಮಹ್ಮದ್ಗೌಸ್ ಯಾದವಾಡ, ಶಾನಹ್ಮದ್ ಬಾಲೇಖಾನ್, ವಿಜಯಕುಮಾರ ಆಲೂರು ಮತ್ತು ಅಲ್ಲಾವುದ್ದೀನ್ ನದಾಫ್ ವಿರುದ್ಧ ವಿವಿಧ ಕಾಯ್ದೆಯಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಬಾಡಿ ವಾರಂಟ್ ಜಾರಿಯಾಗಿದ್ದರೂ, ತಲೆಮರೆಸಿಕೊಂಡಿದ್ದ ಮೂವರು ರೌಡಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ನಗರದಲ್ಲಿ ರೌಡಿಸಂ, ಪುಂಡಾಟ ಹಾಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಂತಹ ಚಟುವಟಿಕೆಗಳು ಕಂಡುಬಂದರೆ, ಮುಲಾಜಿಲ್ಲದೆ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಮಾದ್ಯಮಗಳಿಗೆ ತಿಳಿಸಿದ್ದಾರೆ.