ವಾಣಿಜ್ಯ ನಗರಿ ಹುಬ್ಬಳ್ಳಿ ವಾಣಿಜ್ಯ ವಹಿವಾಟುಗಳಿಗೆ ಎಷ್ಟು ಪ್ರಸಿದ್ಧವೋ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಪ್ರತಿಭಟನೆಗಳಿಗಾಗಿ ಅಷ್ಟೇ ಹೆಸರು ಮಾಡಿದೆ. ಇಲ್ಲಿ ನಡೆಯುವ ಪ್ರತಿಭಟನೆಗಳಿಂದ ಹುಬ್ಬಳ್ಳಿಯ ವಾಹನ ಸವಾರರು ತುಂಬಾ ತೊಂದರೆ ಮತ್ತು ಸಂಚಾರ ದಟ್ಟಣೆ ಅನುಭವಿಸುತ್ತಿರುವುದರಿಂದ, ಇದನ್ನು ತಡೆಯುವ ನಿಟ್ಟಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವನ್ನು (ಕೆಸಿ ಸರ್ಕಲ್) ಪ್ರತಿಭಟನಾ ರಹಿತ ವಲಯವನ್ನಾಗಿ ಮಾಡಲು ಸಲ್ಲಿಸಿದ್ದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಹೋಲುವ ಪ್ರತಿಭಟನಾ ವಲಯವನ್ನು ಸ್ಥಾಪಿಸಲು ನಾಗರಿಕ ಅಧಿಕಾರಿಗಳು ಯೋಜಿಸಿದ್ದರು. ಆದರೆ, ನಗರದ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗಳನ್ನು ತಗ್ಗಿಸಲು ಯಾವುದೇ ಮಹತ್ವದ ಕ್ರಮಗಳನ್ನು ಕೈಗೊಂಡಿಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಹೈಕೋರ್ಟ್ ರಸ್ತೆ ತಡೆಗಾಗಿ ದಂಡ ವಿಧಿಸಿದ ನಂತರ ಈ ವಿಶೇಷ ಪ್ರತಿಭಟನಾ ವಲಯದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಡಾ. ಎಂ.ಸಿ.ಸಿಂಧೂರ್, ‘ಇಂದಿನ ದಿನಗಳಲ್ಲಿ ಮೂಲಭೂತ ಸೇವೆ ಪಡೆಯಲು ಜನರು ಕಷ್ಟಪಡುತ್ತಿದ್ದಾರೆ. ಬೇಡಿಕೆ ಈಡೇರಿಕೆಗೆ ಪ್ರತಿಭಟನೆಯೇ ದಾರಿಯಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ಎರಡರಲ್ಲೂ ಪ್ರತ್ಯೇಕ ಪ್ರತಿಭಟನಾ ವಲಯಗಳ ಅವಶ್ಯಕತೆ ಇದೆ’ ಎಂದು ತಿಳಿಸಿದರು.
‘ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನೆಗೆ ಬಸ್ ಟರ್ಮಿನಲ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಮುಖ್ಯ ರಸ್ತೆಗಳಿಂದ ದೂರವಿರುವಂತೆ ಪ್ರತಿಭಟನಾ ಸ್ಥಳವನ್ನು ಸೂಚಿಸಬೇಕಿದೆ. ಇದರಿಂದ ವಾಹನ ಚಾಲಕರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುವುದು ತಪ್ಪುತ್ತದೆ’ ಎಂದಿದ್ದಾರೆ.
ಸಿ.ಎಂ.ನೂರ್ ಮನ್ಸೂರ್ ಮತ್ತು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಪೌರಾಯುಕ್ತರಾಗಿದ್ದಾಗ ಪ್ರತಿಭಟನಾ ವಿಶೇಷ ವಲಯದ ಕಲ್ಪನೆ ವೇಗ ಪಡೆದುಕೊಂಡಿತ್ತು. ಆ ವೇಳೆ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ್ ಅವರ ಅಭಿಪ್ರಾಯವನ್ನೂ ಕೇಳಿದ್ದರು. ಅಂದಿನಿಂದ ಯೋಜನೆ ಮುಂದುವರಿದಿಲ್ಲ.
ಪ್ರತಿಭಟನೆಗೆ ಶಾಶ್ವತ ಸ್ಥಳವನ್ನು ಸೂಚಿಸುವವರೆಗೆ, ಎಚ್‌ಡಿಎಂಸಿ ಅಧಿಕಾರಿಗಳು ಎಂಜಿ ಪಾರ್ಕ್ ಬಳಿಯ ಭೂಮಿಯನ್ನು ಗುರುತಿಸಿ ವಸತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ವಿನ್ಯಾಸಗೊಳಿಸಿದ್ದರು. ಆದರೆ, ಈ ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿ ಸೋತಿತು ಎನ್ನುತ್ತಾರೆ ಎಂ.ಸಿ.ಸಿಂಧೂರ್.
ಎಚ್‌ಡಿಎಂಸಿ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ವಿಶೇಷ ಪ್ರತಿಭಟನಾ ವಲಯಕ್ಕೆ ಸ್ಥಳ ಹುಡುಕಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಶೀಘ್ರವೇ ಪ್ರತಿಭಟನಾ ವಲಯವನ್ನು ಸೂಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಧ್ಯಮಗಳಿಗೆ ಉತ್ತರಿಸಿದ್ದಾರೆ.