ಧಾರವಾಡ ಮುರುಘಾ ಮಠದ ವ್ಯಾಪ್ತಿಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಬಸವ ಕೇಂದ್ರದ ವತಿಯಿಂದ ಬುಧವಾರ (ಜುಲೈ 2) ಶರಣರ ವಚನ ಬೋರ್ಡ್‌ಗಳನ್ನು ಇಳಕಲ್ ಮಠದ ಗುರುಮಹಾಂತ ಸ್ವಾಮಿ ಅನಾವರಣ ಮಾಡಿದ್ದಾರೆ.
“ವಚನ ಫಲಕಗಳನ್ನು ಎಲ್ಲ ರುದ್ರಭೂಮಿಗಳಲ್ಲಿಲೂ ಹಾಕಿಸುವ ವ್ಯವಸ್ಥೆ ಆಗಬೇಕು. ವಚನಗಳಲ್ಲಿ ನಮ್ಮ ಜೀವನದುದ್ದಕ್ಕೂ ಬೇಕಾಗುವ ಅಂಶಗಳು ಸಿಗುತ್ತವೆ. ನಾವು ಹಾದಿತಪ್ಪಿದಾಗ ಎಚ್ಚರಿಸಲು, ತಿದ್ದಿಕೊಂಡು ನಡೆಯಲು, ನಡೆ ನುಡಿ ಒಂದಾಗಲು, ಹುಟ್ಟಿನಿಂದ ಸಾವಿನವರೆಗೂ ಅತ್ಯವಶ್ಯಕ ಬೇಕಾಗುವ ವಚನಗಳನ್ನು ದಿನಂಪ್ರತಿ ಓದುತ್ತ ಹೋದಾಗ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ.
ರುದ್ರಭೂಮಿಗಳಲ್ಲಿ ವಚನಗಳ ಫಲಕಗಳನ್ನು ಹಾಕಿಸುವ ಪರಿಕಲ್ಪನೆಯನ್ನು ತಂದ ಸಿದ್ಧರಾಮಣ್ಣ ನಡಕಟ್ಟಿ ಮಾತನಾಡಿ, “ಈಗ ನಗರದ ಒಂದು ರುದ್ರಭೂಮಿಯಲ್ಲಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದೇವೆ. ಇನ್ನುಳಿದ ಎಲ್ಲ ರುದ್ರಭೂಮಿಗಳಲ್ಲೂ ಈ ಫಲಕಗಳನ್ನು ಹಾಕಿಸಲು ಮುಂದಾಗುತ್ತೇವೆ. ವಚನಗಳಿಗೆ ಯಾವುದೇ ಜಾತಿ, ಧರ್ಮ, ವರ್ಗ, ಲಿಂಗಭೇದ ಇರುವುದಿಲ್ಲ. ವಚನಗಳು ಸಕಲ ಜೀವಾತ್ಮರಿಗೂ ಲೇಸನ್ನು ಬಯಸಲು ಕಲಿಸುತ್ತವೆ” ಎಂದು ತಿಳಿಸಿದರು.
ಬಸವಂತಪ್ಪ ತೋಟದ ಮಾತನಾಡಿ, “ಮಣ್ಣು ಕೊಡಲು ಬಂದ ಜನರು ಅಂತ್ಯಸಂಸ್ಕಾರದ ಎಲ್ಲ ಕಾರ್ಯಗಳು ಮುಗಿಯುವತನಕ ಅಲ್ಲಲ್ಲಿ ಸಾವಿನ ಬಗ್ಗೆಯೆ ಮಾತನಾಡಿಕೊಳ್ಳುತ್ತ ಕುಳಿತುಕೊಳ್ಳುವ ಬದಲು ಒಂದೆರಡು ವಚನಗಳನ್ನು ಓದಿ ಮನಸ್ಸನ್ನು ಅರಳಿಸಿಕೊಳ್ಳಬಹುದು. ಜಿಗುಪ್ಸೆಗೆ ಒಳಗಾದ ಮನುಷ್ಯನು ಸಾವು ಎಲ್ಲರಿಗೂ ಬರುತ್ತದೆ ಎಂಬ ಸತ್ಯವನ್ನಿರಿತು, ಅಂತ್ಯಸಂಸ್ಕಾರದ ಕುರಿತು ಶರಣರು ಹಲವಾರು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಒಂದು ವಚನ ಓದಿದರೂ ಸಾಕು. ಅದರಲ್ಲೂ ವಿಶೇಷವಾಗಿ ಸ್ಮಶಾನವೆಂಬ ಪವಿತ್ರ ಸ್ಥಳದಲ್ಲಿ ಓದಿದಾಗ ಶಾಸ್ವತ ನೆನಪಿಟ್ಟುಕೊಳ್ಳಬಹುದು” ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧರಾಮ ನಡಕಟ್ಟಿ, ರಾಜು ಮರಳಪ್ಪಣವರ, ಅನುಸೂಯಾ ಸೋಮಣ್ಣ ನಡಕಟ್ಟಿ, ಗಂಗಾಂಬಿಕಾ ಹಂಪ್ಪಣವರ, ಬಸವಂತಪ್ಪ ತೋಟದ, ವಿಶ್ವನಾಥ ನಡಕಟ್ಟಿ ಇನ್ನಿತರರು ಇದ್ದರು.