ವಾರದ ಮಲ್ಲಪ್ಪನವರು ಮರೆಯಬಾರದ ಮಹಾನುಭಾವರು. ಬಸವಾದಿ ಶರಣರ ಕಾಯಕ ಮತ್ತು ದಾಸೋಹವನ್ನು ಚಾಚೂತಪ್ಪದೆ ಪರಿಪಾಲಿಸಿದವರು ವಾರದ ಮಲ್ಲಪ್ಪನವರು. ಅವರು ಶರಣರ ನಿಜ ವಾರಸುದಾರರಾಗಿದ್ದಾರೆ. ತಮ್ಮ ದುಡಿಮೆಯ ಹಣವನ್ನು ಬಡವರಿಗೆ ಹಂಚಿ, ಪ್ರಶಸ್ತಿಗಳನ್ನು ಅವರು ತಿರಸ್ಕರಿಸಿದ್ದರು ಎಂದು ಕೆಎಲ್ಇ ಸಂಸ್ಥೆಯ ವೀಣಾ ಹೂಗಾರ ಹೇಳಿದ್ದಾರೆ.
ಸಿದ್ಧಪ್ಪ ಕಂಬಳಿ ಪ್ರತಿಷ್ಠಾನವು ಧಾರವಾಡದಲ್ಲಿ ಆಯೋಜಿಸಿದ್ದ ‘ಸಮಾಜಮುಖಿ ಚಿಂತಕ ವಾರದ ಮಲ್ಲಪ್ಪನವರ ಸ್ಮರಣೆ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. “ಮಲ್ಲಪ್ಪ ಅವರಂತೆ ನಾಲ್ಕು ಜನರಿದ್ದರೆ ಸಾಕು ಸ್ವಾತಂತ್ರ್ಯವನ್ನು ಸಹಜವಾಗಿ ಪಡೆಯಬಹುದು ಎಂದು ಬಾಲ ಗಂಗಾಧರ ತಿಲಕರು ಹೇಳಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಮಲ್ಲಪ್ಪನವರು ಬ್ರಿಟೀಷರಿಂದ ’King Of Merchant’ ಎಂಬ ಹೆಸರು ಪಡೆದಿದ್ದರು” ಎಂದು ಸ್ಮರಿಸಿದರು.
“45 ಸಾವಿರ ಎಕರೆ ಭೂಮಿಯನ್ನು ಮಲ್ಲಪ್ಪ ಹೊಂದಿದ್ದರು. ರಾಜ್ಯದಲ್ಲಿ ಪ್ಲೇಗ್ ರೋಗ ಬಂದಾಗ ದಿನಕ್ಕೆ 18,000 ರೂಪಾಯಿಗಳ ಖರ್ಚು ಮಾಡುತ್ತಿದ್ದರು. ಅನಾಥ ಮಕ್ಕಳಿಗೆ ಮನೆಗಳನ್ನು ಕಟ್ಟಿಸಿದ್ದರು. ಜಾತ್ಯಾತೀತರಾದ ಅವರು ಬ್ರಾಹ್ಮಣ ಹೆಣ್ಣು ಮಗಳಿಗೆ ರಾಟಿ ಯಂತ್ರ ಖರೀದಿಸಲು ಹಣ ನೀಡುತ್ತಿದ್ದರು. ಮೆಕ್ಕಾ ಪ್ರಯಾಣ ಮಾಡಬಯಸಿದ ಬಡ ಮುಸ್ಲಿಮರಿಗೆ ಧನ ಸಹಾಯ ಮಾಡಿದ್ದರು. ಶೂದ್ರ ಹೆಣ್ಣು ಮಗಳಿಗೆ ಮನೆ ಕಟ್ಟಿಸಿಕೊಟ್ಟಿದ್ದರು. ತಮ್ಮ ಜೀವಿತಾವಧಿಯಲ್ಲಿ ತಮ್ಮ ಇಡೀ ಆಸ್ತಿಯನ್ನು ಸಮಾಜಿಕ ಕಾರ್ಯಕ್ಕೆ ವಿನಿಯೋಗಿಸಿದ್ದರು” ಎಂದು ಹೇಳಿದರು.
ಕಾದಂಬರಿಕಾರ ಯ.ರು.ಪಾಟೀಲ್ ಮಾತನಾಡಿ, “ಸಾಮಾನ್ಯವಾಗಿ ಪವಾಡ ಪುರುಷರೆಂದರೆ ಸಮಾಜದಲ್ಲಿ ಬೇರೆ ಕಲ್ಪನೆಯೆ ಸೃಷ್ಠಿಯಾಗಿದೆ. ಆದರೆ; ಸಮಾಜದ ಅಜ್ಞಾನ, ಅನಕ್ಷರತೆಯನ್ನು ಹೋಗಲಾಡಿಸುವ ಕಾರ್ಯದಲ್ಲಿ ತೊಡಗಿದ ಮಹನೀಯನ್ನು ಪವಾಡ ಪುರುಷರು ಎಂದು ಕರೆಯಬಹುದು. ಸಮಾಜ ಮತ್ತು ಆತ್ಮೋದ್ಧಾರದ ಹಾದಿಯಲ್ಲಿನಡೆದ ವಾರದ ಮಲ್ಲಪ್ಪನವರು ವ್ಯಾಪಾರದಲ್ಲಿ ವಿಜ್ಞಾನ ಮತ್ತು ಆಧುನಿಕತೆ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬ್ರಿಟಿಷ್ ಸರ್ಕಾರದಲ್ಲಿ 12 ಜನ ಸುಪ್ರಸಿದ್ಧ ವ್ಯಾಪಾರಸ್ಥರಲ್ಲಿ ವಿಫಲತೆಯಲ್ಲಿ ಸಫಲತೆಯನ್ನು ಕಂಡ ಕನ್ನಡಿಗರಾದ ವಾರದ ಮಲ್ಲಪ್ಪನವರೂ ಒಬ್ಬರು” ಎಂದರು.
“ವಾರದ ಮಲ್ಲಪ್ಪನವರು ಕಾರ್ಮಿಕರಿಗೆ ವಸತಿ ನಿಲಯ, ಆಸ್ಪತ್ರೆ ಕಟ್ಟಿಸುತ್ತಾರೆ. ಹಿಂದುಳಿದ ವರ್ಗ, ಹರಿಜನರ ಏಳ್ಗೆಗಾಗಿ ಹೆಚ್ಚಿನ ಒತ್ತು ನೀಡುತ್ತಾರೆ. ಮಲ್ಲಪ್ಪನವರ ಅಂತ್ಯ ದುರಂತವಾಗಿದ್ದರು ಅವರ ಸಾಮಾಜಿಕ ಕಾರ್ಯ ಅದ್ಭುತವಾಗಿತ್ತು. ಹೆತ್ತವರು ಅವರಿಗೆ ಇಂಗ್ಲೀಷ್ ಕಲಿಕೆಗೆ ಅವಕಾಶ ನೀಡದಿದ್ದರೂ ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಾರೆ. ಲೋಕಮಾನ್ಯ ತಿಲಕರು ದೇಶದ್ರೋಹಿ ಎಂದು ಸರ್ಕಾರ ಘೋಷಿಸಿದಾಗ ಅವರು ದೇಶಪ್ರೇಮಿಗಳೆಂದು ಮಲ್ಲಪ್ಪನವರು ಸರ್ಕಾರಕ್ಕೆ ಮನವರಿಕೆ ಮಾಡುತ್ತಾರೆ. ಅವರು ಕಟ್ಟಿಸಿದ್ದ ಇಂದ್ರಭವ ಇಂದು ಕಾರ್ಪೊರೇಷನ್ ಕಛೇರಿಯಾಗಿ ಪರಿವರ್ತನೆಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ರವಿ ಕಗ್ಗಣ್ಣವರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗಿರೀಶ್ ದೇಸೂರ, ಬಸವಕೇಂದ್ರದ ಬಿ.ಎಸ್.ತೋಟದ, ಕಂಬಳಿ ಟ್ರಸ್ಟ್‌ನ ಅಧ್ಯಕ್ಷ ಶಶಿಧರ ತೋಡಕರ, ಹಿರಿಯ ನ್ಯಾಯವಾದಿ ಶೇಖರ್ ಕವಳಿ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಟಾನದ ಪದಾಧಿಕಾರಿಗಳು, ಇನ್ನಿತರರು ಇದ್ದರು.