ಧಾರವಾಡ ನಗರದ ರೆಡ್ ಕ್ರಾಸ್ ಸಂಸ್ಥೆ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವಿಶ್ವಶಾಂತಿಯ ದಿನವನ್ನಾಗಿ ಮಾನವೀಯತೆಗಾಗಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಮಾನವೀಯತೆಗಾಗಿ ನಡಿಗೆ’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ವಿವಿಧ ಕಾಲೇಜುಗಳಿಂದ ರ‍್ಯಾಲಿ ಏರ್ಪಡಿಸಲಾಗಿದ್ದು, ಅಂಜುಮನ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ವಿವುಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮನಗುಂಡಿಯ ಬಸವಾನಂದ ಸ್ವಾಮೀಜಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನವಾಗಿದೆ. ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ಈ ನೇತ್ರದಾನವೂ ಒಂದು. ಹುಟ್ಟಿನಿಂದಲೋ, ಅಪಘಾತದಿಂದಲೋ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ ಸತ್ತ ನಂತರ ಮನುಷ್ಯ ಮಾಡುವ ನೇತ್ರದಾನ ದೃಷ್ಟಿಯ ಭಾಗ್ಯ ಒದಗಿಸುತ್ತದೆ ಎಂದು ನೇತ್ರದಾನದ ಮಹತ್ವ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಸಮಿತಿಯ ಡಾ. ವೀರಾಪುರ್ ಮಾತನಾಡಿ, ಶಾಂತಿ, ಸಹಬಾಳ್ವೆ ಈ ದೇಶದ ಆಸ್ತಿ. ವಿವಿಧತೆಯಲ್ಲಿ ಏಕತೆ ಸಾಧಿಸುವ ಬದ್ಧತೆ ಯುವಶಕ್ತಿಗಿದೆ. ಮತೀಯ ಗಲಭೆಗಳಿಂದ ಯುವಕರು ದೂರ ಉಳಿಯಬೇಕಿದೆ. ಇಂದಿನ ಯುವಕರು ಡ್ರಗ್ಸ್‌ಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದನ್ನು ಪಾಲಕರು ಮತ್ತು ಶಿಕ್ಷಕರು ಗಮನಿಸಿ ತಡೆಯಬೇಕಿದೆ ಎಂದು ಶಾಂತಿ, ಸಹಬಾಳ್ವೆಯ ಜೀವನಕ್ಕೆ ಕರೆಕೊಟ್ಟರು.
ರ‍್ಯಾಲಿಯನ್ನು ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಂ.ಮಕಾನದಾರ ಚಾಲನೆ ನೀಡಿದರು. ಡಾ. ಜಾಧವ, ಡಾ. ತಾಜುಣ್ಣಿಸ್ಸಾ, ಡಾ. ನಾಲತವಾಡ, ಪ್ರೊ. ಮುಲ್ಲಾ ಹಾಗೂ ಪ್ರೊ. ನರಗುಂದ್ ಜಾಥಾವನ್ನು ಯಶಸ್ವಿಗೊಳಿಸಿದರು. ಪಾರ್ವತಿ ಕರ್ ಕಾರ್ಯಕ್ರಮದ ವಂದನಾರ್ಪಣೆ ಮತ್ತು ನಿರೂಪಣೆ ಮಾಡಿದರು.
ಇದನ್ನು ಓದಿದ್ದೀರಾ? ಚಿಕ್ಕೋಡಿ | ರಾಜ್ಯ ರಾಜಕಾರಣಕ್ಕೆ ಸಹೋದರ ರಾಹುಲ್ ಕಾಲಿಡಲಿದ್ದಾರೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.