ಕಟ್ಟಡ ಕಾರ್ಮಿಕರಿಗೆ ಮಂಡಳಿಯು ಘೋಷಿತ ಸೌಲಭ್ಯಗಳನ್ನು ಖಾತ್ರಿಪಡಿಸಲು ಮತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನಾ ದಿನದ ಅಂಗವಾಗಿ ಬುಧವಾರದಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, “ಕಟ್ಟಡ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸಲು ಸಂಘಟಿತ ಹೋರಾಟದ ಒತ್ತಡದಿಂದ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಎಲ್ಲ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದ್ದ ಮಂಡಳಿಯು, ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ” ಎಂದು ಆರೋಪಿಸಿದರು.
“ಕಳೆದ 2 ವರ್ಷಗಳಿಂದ ಬರಬೇಕಾದ ಶೈಕ್ಷಣಿಕ ಸಹಾಯಧನ ಇನ್ನೂ ಬಂದಿಲ್ಲ. ನೋಂದಾಯಿತ ಕಾರ್ಮಿಕನ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ವಯಸ್ಸಾದ ಬಳಿಕ 6 ತಿಂಗಳ ಒಳಗೆ ಪಿಂಚಣಿ ಪಡೆಯಲು ಹರಸಾಹಸ ಪಡಬೇಕಾಗಿದೆ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ. ಇಂದಿಗೂ ಬಹುತೇಕ ನೈಜ ಕಟ್ಟಡ ಕಾರ್ಮಿಕರು ನೋಂದಣಿಯಾಗದೆ ಹೊರಗೂಳಿಯುವುದು ಒಂದೆಡೆಯಾದರೆ, ಮತ್ತೊಂದೆಡೆ ಕಟ್ಟಡ ಕಾರ್ಮಿಕರಲ್ಲದವರ ನೋಂದಣಿ ಅವ್ಯಾಹತವಾಗಿ ಸಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾರ್ಮಿಕ ಇಲಾಖೆಯು ಬೋಗಸ್ ಕಾರ್ಡ್ಗಳನ್ನು ಪತ್ತೆಹಚ್ಚಿ ರದ್ದು ಮಾಡಿ, ಏಜೆಂಟರ ಶೋಷಣೆ ತಪ್ಪಿಸಬೇಕಾಗಿದೆ. ಕಟ್ಟಡ ಕಾರ್ಮಿಕರಿಗೆ ಸೇರಿದ ಮಂಡಳಿಯ ಹಣ, ಶಿಶುವಿಹಾರ, ಅಂಗನವಾಡಿ, ಮೊಬೈಲ್ ಕ್ಲಿನಿಕ್ ಇತ್ಯಾದಿ ಯೋಜನೆಗಳ ಮೂಲಕ ಅನಾವಶ್ಯಕವಾಗಿ ಪೋಲಾಗುತ್ತಿದೆ. ಅಲ್ಲದೆ ಮಂಡಳಿಯ 518 ಕೋಟಿ ರೂಪಾಯಿ ಹಣವನ್ನು ಸ್ಲಂ ಬೋರ್ಡ್ಗೆ ನೀಟ್ಟಿದ್ದು, ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಈವರೆಗೆ ವಿವಿಧ ಕಿಟ್ಗಳು, ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು: ಎಂದು ಒತ್ತಾಯಿಸಿದರು.
“ಅಪಘಾತದಲ್ಲಿ ಜೀವ ಕಳೆದುಕೊಂಡ ಕಾರ್ಮಿಕರ ಕುಟುಂಬಗಳಿಗೆ ಮತ್ತು ಅಪಘಾತದಲ್ಲಿ ದುಡಿಯುವ ಸಾಮರ್ಥ್ಯವನ್ನು ಕಳೆದುಕೊಂಡ ಕಾರ್ಮಿಕರಿಗೆ 10 ಲಕ್ಷ ರೂ.ಗಳ ಪರಿಹಾರ ಹಾಗೂ ಆ ಕಾರ್ಮಿಕನಿಗೆ ಜೀವನ ಯೋಗ್ಯ ಪಿಂಚಣಿ ನೀಡಬೇಕು. ಮಂಡಳಿಯ ಆದಾಯ ಹೆಚ್ಚಿಸಲು ಬಾಕಿಯಿರುವ ಸೆಸ್ ಅನ್ನು ವಸೂಲಿ ಮಾಡಬೇಕಿದೆ. ಸರ್ಕಾರಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.2ರವರೆಗೆ ಸೆಸ್ ಹೆಚ್ಚಿಸಿ. ಈ ಎಲ್ಲ ನ್ಯಾಯಯುತ ಬೇಡಿಕೆಗಳ ಈಡೇರಿಕಾಗಿ ಸಮಸ್ತ ಕಟ್ಟಡ ಕಾರ್ಮಿಕರು ತಮ್ಮ ಅಸ್ತ್ರವಾದ ಯೂನಿಯನ್ನ್ನು ಗಟ್ಟಿಗೊಳಿಸಿಕೊಂಡು ರಾಜಿ ರಹಿತ ಹೋರಾಟ ಕಟ್ಟಲು ಮುಂದಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ತಮಿಳುನಾಡಿಗೆ ನೀರು ಬಿಡದಂತೆ ಆಹೋರಾತ್ರಿ ಧರಣಿ
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಕಟ್ಟಡ ಕಾರ್ಮಿಕ ಯೂನಿಯನ್ನ ಜಿಲ್ಲಾ ಕಾರ್ಯದರ್ಶಿ ಯೋಗಪ್ಪ ಜ್ಯೋತೆಪ್ಪನವರ, ಉಪಾಧ್ಯಕ್ಷ ರುದ್ರಕಾಂತ್ ವಾಣಿ, ಹಸ್ಮೀನ್ ಖಾನ್ ರಾಟಿಮನಿ, ಜಿಲ್ಲಾ ಸಮಿತಿ ಸದಸ್ಯರುಗಳಾದ ರಿಯಾಜ್ ತಡಕೋಡ, ಪ್ರಶಾಂತ ಕಮ್ಮಾರ, ಮಹ್ಮದ್ ಬಿಜಾಪುರ,ಮಾಲುಮ್ ಚರ್ಕಾರ್, ಮಂಜು ಬನ್ನಿಗಿಡದ, ಶೋಯೆಬ್ ಪೀರ್ಜ್ಯಾದೆ, ಶಾನವಾಜ್ ಅಕ್ಕೂರ, ಗಿರಿಸಾಗರ್, ಬಸವನಗೌಡ ಕುಂದಗೋಳ, ಜಿಲಾನಿ, ಫಕ್ರುಸಾಬ್ ಮುಜಾವರ ಸೇರಿದಂತೆ ಇತರರು ಇದ್ದರು.