ಖಾಸಗಿ ಆಸ್ಪತ್ರೆಯ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ತಮ್ಮ ನಿವಾಸದಲ್ಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಅವರ ಪತ್ನಿಯೇ ಅವರನ್ನು ಹತ್ಯೆಗೈದಿದ್ದಾರೆ. ಅಲ್ಲದೆ, ಮಗನ ಮೇಲೂ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ವೈದ್ಯರನ್ನು ಡಾ. ಕಿರಣ್ ಹೊನ್ನಣ್ಣವರ ಎಂದು ಗುರುತಿಸಲಾಗಿದೆ. ಅವರು ಧಾರವಾಡದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅನಸ್ಥೀಷಿಯಾ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಗರದ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ಬುಧವಾರ ರಾತ್ರಿ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆದ ಸಂದರ್ಭದಲ್ಲಿ ಮನೆಯೊಳಗೆ ಡಾ. ಕಿರಣ್, ಅವರ ಪತ್ನಿ-ವೈದ್ಯೆ ಪ್ರಿಯಾಂಕಾ ಹಾಗೂ ಅವರ ಪುತ್ರ ಮಾತ್ರ ಇದ್ದರು ಎನ್ನಲಾಗಿದೆ. ವೈದ್ಯ ಕಿರಣ್ಗೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮಗನಿಗೂ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಕಿರಣ್ ಅವರ ಕುಟುಂಬಸ್ಥರು ಪ್ರಿಯಾಂಕಾ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ದೂರು ಮತ್ತು ಮನೆಯಲ್ಲಿ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ಪ್ರಿಯಾಂಕಾರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಬಿಗಡಾಯಿಸಿದೆ ಸೋನಮ್ ಆರೋಗ್ಯ; ಇತಿಹಾಸದಲ್ಲಿ ಮೋದಿಯೇ ಅಪರಾಧಿ – ಸಿಗದು ಕ್ಷಮೆ!
ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ; ಘಟನಾ ಸ್ಥಳದಲ್ಲಿ ಮಹಿಳೆ ಮೊಬೈಲ್ ಬಳಸುತ್ತಿರುವುದು ಕಂಡುಬಂದಿದೆ. ಆದರೆ, ಆ ವಿಡಿಯೊಗಳ ಪ್ರಾಮಾಣಿಕತೆ ಮತ್ತು ಅವುಗಳಲ್ಲಿರುವ ಸನ್ನಿವೇಶವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಪ್ರಸ್ತುತ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ದಂಪತಿಯ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ, ಕುಟುಂಬದ ಹಿನ್ನೆಲೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ನಿಖರ ಕಾರಣವೇನು ಎಂಬುದು ಗೊತ್ತಾಗಲಿದೆ.



