ಎದ್ದೇಳು ಕರ್ನಾಟಕದ ನೇತೃತ್ವದಲ್ಲಿ, ಯಾದಗಿರಿ ಜಮಾತ್ ಹಾಗೂ ದಲಿತ ಸಂಘರ್ಷ ಸಮಿತಿಯ ಸಹಯೋಗದೊಂದಿಗೆ ನಾಗರಿಕ ಮತಕಾವಲು ಸಮಿತಿಯಿಂದ ಎಸ್ಐಆರ್ (ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜನಜಾಗೃತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಹಾಗೂ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಮರೆಪ್ಪ ಚಟ್ಟೇಕರ್, ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಅದನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಪ್ರತಿಯೊಬ್ಬ ಅರ್ಹ ಮತದಾರರು ಎನ್ಯೂಮರೇಷನ್ ಫಾರಂ ಅನ್ನು ಕಡ್ಡಾಯವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಸುಭಾನ್ ಅವರು ಎಸ್ಐಆರ್ ಪ್ರಕ್ರಿಯೆಯ ಉದ್ದೇಶ, ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಮತದಾರರು ಪಾಲಿಸಬೇಕಾದ ಕ್ರಮಗಳ ಕುರಿತು ವಿಷಯ ಮಂಡಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ | ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಇಟೆ, ನಿವೃತ್ತ ವೈದ್ಯಾಧಿಕಾರಿ ಡಾ. ಭಗವಂತ ಅನವಾರ, ಜಿಲ್ಲಾ ಸಂಯೋಜಕ ಮೊಹಮ್ಮದ್ ಸಲೀಂ, ಎಂ.ಡಿ. ಜಿಲಾನಿ ಸಾಬ್, ಎಂ.ಡಿ. ಶುಭಾನ್ ಸಾಬ್, ಗೋಪಾಲ್ ತೆಳಿಗೇರಿ, ಭೀಮರಾಯ ಹೊಸಮನಿ, ಸೈದಪ್ಪ ಕುಲೂರ್, ನಿಂಗಪ್ಪ ಬೀರನಾಳ, ನರೇಂದ್ರ ಅನವಾರ, ಪರಶುರಾಮ ಒಡೆಯರ್, ವಿಜಯಕುಮಾರ್ ಆಶಾನಾಳ, ಮಲ್ಲಿಕಾರ್ಜುನ ದೇವತ್ಕಲ್, ಭೀಮರಾಯ ಸುಂಗುಲ್ಕರ್, ಮಲ್ಲು ಬೊಮ್ಮನ, ಅಂಬ್ರೇಶ್ ಚೆಟ್ಟೇಕರ್, ಮಹೇಂದ್ರ ಕುರುಕುಂಬ್ಳೆ, ಶ್ರೀಕಾಂತ್ ಸುಂಗುಲ್ಕರ್, ಇಕ್ಬಾಲ್ ಒಂಟಿ ಸೇರಿದಂತೆ ಮತಗಾವಲು ಸಮಿತಿಯ ಸದಸ್ಯರು, ಎದ್ದೇಳು ಕರ್ನಾಟಕ, ಯಾದಗಿರಿ ಜಮಾತ್, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




