- ʼಸೌಜನ್ಯ ಕೊಲೆ ಪ್ರಕರಣ ವಿಚಾರದಲ್ಲಿ ಸರ್ಕಾರ ಕ್ಯಾರೆ ಎನ್ನುತ್ತಿಲ್ಲʼ
- ನಿರ್ದೋಷಿ ಸಂತೋಷ ರಾವ್‌ಗೆ ₹25 ಲಕ್ಷ ಪರಿಹಾರ ಘೋಷಿಸಬೇಕು.
ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣ ಸೇರಿದಂತೆ ಬೆಳ್ತಂಗಡಿ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅತ್ಯಾಚಾರ, ಮಹಿಳೆಯರ ಆತ್ಮಹತ್ಯೆ, ಹೆಣ್ಣುಮಕ್ಕಳು ಕಾಣೆ ಎಲ್ಲ ಪ್ರಕರಣಗಳನ್ನು ನ್ಯಾಯಾಧೀಶರ ನೇತೃತ್ವದಲ್ಲಿ ಮರು ತನಿಖೆ ಮಾಡಿಸಬೇಕು ಎಂದು ಶ್ರೀರಾಮಸೇನೆ ಕಾರ್ಯಕರ್ತರು ಆಗ್ರಹಿಸಿದರು.
ರಾಜ್ಯಾದ್ಯಂತ ಸುದ್ಧಿಯಾಗಿರುವ ಸೌಜನ್ಯ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಆಗ್ರಹಿಸಿದರು.
ಮುಖಂಡರು ಮಾತನಾಡಿ, “ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆಯಾಗಿ 13 ವರ್ಷಗಳು ಕಳೆದರೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸಾಕಷ್ಟು ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಈ ಪ್ರಕರಣದ ಹಿಂದೆ ದೊಡ್ಡವರ ಮತ್ತು ದೊಡ್ಡವರ ಮಕ್ಕಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? 161 ತಾಲೂಕುಗಳು ಬರ ಘೋಷಣೆಗೆ ಅರ್ಹ, ಸಿಎಂಗೆ ಶಿಫಾರಸು: ಸಚಿವ ಕೃಷ್ಣಭೈರೇಗೌಡ
“ಸೌಜನ್ಯ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಬೇಕು. ಸೌಜನ್ಯ ಪ್ರಕರಣದ ನಿರ್ದೋಷಿ ಸಂತೋಷ ರಾವ್ ಅವರಿಗೆ ₹25 ಲಕ್ಷ ಪರಿಹಾರ ಘೋಷಿಸಬೇಕು. ಮಹಿಳೆಯರ ಮೇಲೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಮಂಜು ಕಾಟಕರ, ರಾಜು ಖಾನಪ್ಪನವರ, ಅಣ್ಣಪ್ಪ ದಿವಟಗಿ, ವಿಶ್ವಾಸ ನಾಗಶೆಟ್ಟಿ, ಮೈಲಾರ ಗುಡ್ಡಪ್ಪನವರ, ಚಿದು ಕಲಾಲ, ಹನುಮಂತ ಉಣಕಲ್ಲ, ಯಮೋಜಿ, ಸೋಮು ಕಮತಿ, ಮಂಜು ಕವಲಗೇರಿ ಸೇರಿದಂತೆ ಇತರರು ಇದ್ದರು.