ಧಾರವಾಡ | 14 ವರ್ಷ ಕಳೆದರೂ ಪೌರಕಾರ್ಮಿಕರ ಬೇಡಿಕೆ ಈಡೇರಿಸದ ಮಹಾನಗರ ಪಾಲಿಕೆ; ಆರೋಪ

Date:

Advertisements

ಪೌರಕಾರ್ಮಿಕರ ಸಂಘದ ಬಹುದಿನಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತು 799 ಗುತ್ತಿಗೆ ಪೌರ ಕಾರ್ಮಿಕರಿಗೆ ನೇರವೇತನ ಪಾವತಿಸುವಂತೆ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಕಾರ್ಯಕರ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಪೌರಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ ಕುಂಟ್ರಾಳ ಮಾತನಾಡಿ, “ಪೌರಕಾರ್ಮಿಕರ ಸಂಘದ ಬಹುದಿನ ಬೇಡಿಕೆಗಳನ್ನು ಈಡೇರಿಸದೆ ಮಹಾನಗರ ಪಾಲಿಕೆ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯವಾಗಿದೆ. 2023ರ ಮಾರ್ಚ್‌ 27ರಂದು ಪೌರಕಾರ್ಮಿಕರ ಧರಣಿನಿರತ ಸ್ಥಳಕ್ಕೆ ಬಂದು ಪಾಲಿಕೆ ಆಯುಕ್ತರು ನೇರವೇತನ ಪಾವತಿ ಮಾಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡುತ್ತೇವೆ ಹಾಗೂ ಸಂಘದ ಕಚೇರಿಗೆ ಪಾಲಿಕೆಯಲ್ಲಿ ಠರಾವು ಅನ್ವಯ ಕೊಠಡಿಯನ್ನು ಒದಗಿಸುತೇವೆಂದು ಭರವಸೆ ನೀಡಿದ್ದರು” ಎಂದರು.

“2023ರ ಮಾರ್ಚ್‌ನಲ್ಲಿ ಆಯುಕ್ತರು ಆಡಳಿತಾಧಿಕಾರಿಗೆ ಟಿಪ್ಪಣಿ ಕಳುಹಿಸಿದ್ದಾರೆ. ಆದರೆ 6 ತಿಂಗಳು ಗತಿಸಿದರೂ ಪಾಲಿಕೆ ಸಾಮಾನ್ಯ ಸಭೆಗೆ ಸದರಿ ವಿಷಯವನ್ನು ಚರ್ಚೆಗೆ ತರದೇ ಗುತ್ತಿಗೆ ಪೌರಕಾರ್ಮಿಕರನ್ನು ವಂಚಿಸಲಾಗಿದೆ. ಸಂಘಕ್ಕೆ ಕೊಠಡಿಯನ್ನೂ ನೀಡದೆ ಸಾಮಾನ್ಯ ಸಭೆಯ ಠರಾವು ಉಲ್ಲಂಘನೆ ಮಾಡಿದೆ. ಜನಪ್ರತಿನಿಧಿಗಳಿಗೆ ಅವಮಾನ ಮಾಡಲಾಗಿದೆ” ಎಂದು ಆರೋಪಿಸಿದರು.

Advertisements

ಈ ಕುರಿತು ಈ ದಿನ.ಕಾಮ್‌ನೊಂದಿಗೆ ಪೌರಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವಿಜಯ ಕುಂಟ್ರಾಳ ಮಾತನಾಡಿ, “ಪಾಲಿಕೆಯ ನೂತನ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅವರು 2 ಬಾರಿ ನಮ್ಮ ಪೌರಕಾರ್ಮಿಕರ ಸಂಘದ ಸಭೆ ಕರೆದು ಬೇಡಿಕೆಗಳಿಗೆ ಪ್ರತ್ಯೇಕ ಮನವಿ ಸಲ್ಲಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಸಂಘವು ಕಳೆದ ಜುಲೈ 7 ಹಾಗೂ 27ರಂದು ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಆದರೆ ಪಾಲಿಕೆಯವರು ಜಾಣಕುರುಡರಂತೆ ವರ್ತಿಸುತ್ತ ಪೌರಕಾರ್ಮಿಕರ ಸಂವಿಧಾನಬದ್ಧ ಹಾಗೂ ಶಾಸನಬದ್ಧ ಬೇಡಿಕೆಗಳನ್ನು 14 ವರ್ಷಗಳು ಗತಿಸಿದರೂ ಈಡೇರಿಸದೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ ಸಫಾಯಿ ಕರ್ಮಚಾರಿಗಳ ಆಯೋಗದ ನಿರ್ದೇಶನಗಳನ್ನು ಗಾಳಿಗೆ ತೂರಿ ಪೌರಕಾರ್ಮಿಕರನ್ನು ಶೋಷಿಸುತ್ತಿದ್ದಾರೆ” ಎಂದು ದೂರಿದರು.

“ಪಾಲಿಕೆ ಸರ್ಕಾರದ ಆದೇಶ ಮತ್ತು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಳೆದ 6 ವರ್ಷಗಳಿಂದ ಗುತ್ತಿಗೆ ಪದ್ಧತಿಯನ್ನು ಮುಂದುವರೆಸಿದೆ. ಗುತ್ತಿಗೆ ಕಾರ್ಮಿಕ ಕಾಯ್ದೆ 1970 ರ ಅನ್ವಯ ಸಹಾಯಕ ಕಾರ್ಮಿಕ ಆಯುಕ್ತರಿಂದ ಲೇಬರ್ ಲೈಸೆನ್ಸ್ ಪಡೆಯದೆ ವಾಣಿಜ್ಯ ಮಳಿಗೆ ಆಡಳಿತ ಕಚೇರಿ ಎಂದು ಸಂಬಂಧವಿಲ್ಲದ ಲೈಸೆನ್ಸ್ ಪಡೆದು ಗುತ್ತಿಗೆದಾರರು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಕಳೆದ 14 ವರ್ಷಗಳಿಂದ ಕಾನೂನು ಬಾಹಿರವಾಗಿ ಸ್ವಚ್ಛತಾ ಗುತ್ತಿಗೆಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಈ ಕೂಡಲೇ ಗುತ್ತಿಗೆಯನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.

“2023 ಮಾರ್ಚ್‌ನಲ್ಲಿ ಪಾಲಿಕೆ ಆಯುಕ್ತರು ಆಡಳಿತಾಧಿಕಾರಿಗೆ ಸಲ್ಲಿಸಿದ ಟಿಪ್ಪಣಿಯಂತೆ ಪಾಲಿಕೆಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸುವಂತೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್‌ ಮಾಡಬೇಕು. ಪಾಲಿಕೆಯಲ್ಲಿ ಖಾಲಿ ಉಳಿದಿರುವ ಪೌರಕಾರ್ಮಿಕರ 340 ಹುದ್ದೆಗಳನ್ನು ಈ ಕೂಡಲೇ ನೇರನೇಮಕಾತಿ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.

“ಪಾಲಿಕೆಯ ನೇರನೇಮಕಾತಿ, ನೇರವೇತನ ಹಾಗೂ ಗುತ್ತಿಗೆ ಪೌರಕಾರ್ಮಿಕರ ಪಟ್ಟಿಯಲ್ಲಿ ನಕಲಿ ಪೌರಕಾರ್ಮಿಕರು ಇರುತ್ತಾರೆ(ಇಎಸ್‌ಐ ಅಧಿಕಾರಿಗಳ ಸಮೀಕ್ಷೆ ಪಟ್ಟಿಯಂತೆ ಹಾಗೂ ಪೌರಕಾರ್ಮಿಕರು ಆಯುಕ್ತರಿಗೆ ನೀಡಿರುವ ಆಕ್ಷೇಪಣೆಯಂತೆ) ಕೂಡಲೇ ನಕಲಿ ಪೌರಕಾರ್ಮಿಕರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಪಾಲಿಕೆಯ ಸಾಮಾನ್ಯ ಸಭೆಯ ಠರಾವಿನಂತೆ ಪಾಲಿಕೆ ಆವರಣದಲ್ಲಿ ಪೌರಕಾರ್ಮಿಕರ ಸಂಘಕ್ಕೆ ಈ ಕೂಡಲೇ ಕೊಠಡಿಯನ್ನು ಒದಗಿಸಬೇಕು” ಎಂದರು.

“ಕನಿಷ್ಠ ವೇತನ ವ್ಯತ್ಯಾಸ ಬಾಕಿ 9 ಕೋಟಿ ರೂ.ಗಳನ್ನು ಕೂಡಲೇ ಪೌರಕಾರ್ಮಿಕರಿಗೆ ಪಾವತಿಸಬೇಕು. ಪಾಲಿಕೆಯ 868 ಮಹಿಳಾ ಪೌರಕಾರ್ಮಿಕರಿಗೆ ತಲಾ ₹2500ರಂತೆ ಮೆಡಿಕಲ್ ಬೋನಸ್ ಸೇರಿದಂತೆ ಒಟ್ಟು ₹21.70 ಲಕ್ಷ ಪಾವತಿಸಬೇಕು. ಸರ್ಕಾರದ ಆದೇಶದಂತೆ ₹2000 ಪ್ರತಿ ತಿಂಗಳು ಸಂಕಷ್ಟ ಭತ್ಯೆಯನ್ನು ಈ ಕೂಡಲೇ ಪೌರಕಾರ್ಮಿಕರಿಗೆ ಪಾವತಿಸಬೇಕು. 2 ವರ್ಷಗಳ ತುಟ್ಟಿಭತ್ಯೆ ಬಾಕಿ 2 ಕೋಟಿ ರೂ.ಗಳನ್ನು ಪೌರಕಾರ್ಮಿಕರಿಗೆ ಪಾವತಿಸಬೇಕು” ಎಂದು ಒತ್ತಾಯಿಸಿದರು.

“ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ಜಾರಿಗೊಳಿಸಬೇಕು. 60 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೇರಪಾವತಿ/ಹೊರ ಗುತ್ತಿಗೆ ಪೌರಕಾರ್ಮಿಕರಿಗೆ ತಲಾ ₹10 ಲಕ್ಷ ಪರಿಹಾರ ಹಾಗೂ ಪ್ರತಿ ತಿಂಗಳು ₹5000 ನಿವೃತ್ತಿ ವೇತನ ನೀಡಬೇಕು. ಪೌರಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಗಳ ಅನ್ವಯ ನಿಗಧಿತ ಸಮಯಕ್ಕೆ ಮಾಸಿಕ ವೇತನ ಪಾವತಿಸಬೇಕು. ಇಎಸ್‌ಐ, ಇಪಿಎಫ್ ವಂತಿಗೆ ಪಾವತಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಪೌರಕಾರ್ಮಿಕರ ಅಗತ್ಯತೆ ಈಡೇರಿಕೆಗೆ ಒತ್ತಾಯ

“ಸುರಕ್ಷಾ ಸಾಧನಗಳು, ಕೆಲಸದ ಪರಿಕರಗಳು, ಹ್ಯಾಂಡ್ ಗ್ಲೌಸ್, ಗಮ್ ಬೂಟ್, ಪುಶ್ ಕಾರ್ಟ್ ಸೇರಿದಂತೆ ಇತರೆ ಪರಿಕರಗಳನ್ನು ಪೂರೈಸಬೇಕು. ಉತ್ತಮ ಗುಣಮಟ್ಟದ ಬೆಳಗಿನ ಉಪಹಾರ ಪೂರೈಸಬೇಕು. 2 ಜೊತೆ ಸ್ಟೀಲಿನ ಟಿಫನ್ ಬಾಕ್ಸ್ ಮತ್ತು ಸ್ಟೀಲಿನ ನೀರಿನ ಬಾಟಲಿಗಳನ್ನು ಕೂಡಲೇ ಒದಗಿಸಬೇಕು. ಅಧ್ಯಕ್ಷರು ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಸಭೆಯ ನಡಾವಳಿಗಳು ನಿರ್ದೇಶನಗಳನ್ನು ಈ ಕೂಡಲೇ ಅನುಷ್ಠಾನಗೊಳಿಸಬೇಕು” ಎಂದು ಒತ್ತಾಯಿಸಿದರು.

“ಪೌರಕಾರ್ಮಿಕರ ಸಂಘದ 14 ವರ್ಷಗಳ ಬೇಡಿಕೆಗಳನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಬೇಕು. ಒಂದು ವಾರದ ಒಳಗಾಗಿ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ತಪ್ಪಿದಲ್ಲಿ ಅವಳಿ ನಗರದ ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಗೃಹಿಣಿ ಅಸಹಜ ಸಾವು: ಕೊಲೆ ಶಂಕೆ

ಇತ್ತೀಚಿಗಷ್ಟೇ ವಿವಾಹವಾಗಿದ್ದ ಗೃಹಿಣಿಯೊಬ್ಬರ ಅಸಹಜ ಸಾವು ಸಂಭವಿಸಿರುವ ಘಟನೆ ಹುಬ್ಬಳ್ಳಿ ನಗರದ...

ಧಾರವಾಡ | ಆ. 15 ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ, ಏಕತೆ ರೂಢಿಸಿಕೊಳ್ಳುವ ದಿನ: ಸಚಿವ ಸಂತೋಷ್ ಲಾಡ್

ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ...

ಹುಬ್ಬಳ್ಳಿ | ಜಾತಿ ನಿಂದನೆ; ಸೂಕ್ತ ಕಾನೂನು‌ ಕ್ರಮಕ್ಕೆ ಕುರುಬ ಸಮಾಜ ಒತ್ತಾಯ

ಸಾರ್ವಜನಿಕವಾಗಿ ಕುರುಬ ಸಮಾಜವನ್ನು ನಿಂದನೆ ಮಾಡಿ ಹಾಗೂ ಕುರುಬ ಸಮುದಾಯದ ಮುಖ್ಯಮಂತ್ರಿ...

Download Eedina App Android / iOS

X