ಹುಬ್ಬಳ್ಳಿ ನಗರದ ವಾರ್ಡ್ ಸಂಖ್ಯೆ 35ರ ಬೈರಿದೇವರಕೊಪ್ಪ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಮಶಾನದ ಕೊರತೆಯಿಂದಾಗಿ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ನಿವಾಸಿಗಳು ಅನೇಕ ವರ್ಷಗಳಿಂದ ರೈತರಿಗೆ ಸೇರಿದ ಖಾಸಗಿ ಭೂಮಿಯಲ್ಲಿ ಅಂತ್ಯಕ್ರಿಯೆ ವಿಧಿಗಳನ್ನು ನಡೆಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಮಶಾನಕ್ಕೆ ಭೂಮಿ ಒದಗಿಸಲು ವಿಫಲರಾಗಿದ್ದಾರೆ.
ಧಾರವಾಡ ಜಿಲ್ಲೆ ಹುಬ್ಬಳ್ಳಿ ನಗರದ ಬೈರಿದೇವರಕೊಪ್ಪದಲ್ಲಿ ಸ್ಮಶಾನವಿಲ್ಲದೆ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ಎದುರಾದರೆ ತುಂಬಾ ಹೀನಾಯವಾಗಿರುತ್ತದೆ. ಹಾಗಾಗಿ ಗ್ರಾಮಕ್ಕೆ ಸ್ಮಶಾನ ಒದಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಮಶಾನ ಭೂಮಿಗೆ ಮನವಿ ಮಾಡಿದರೆ, ಗ್ರಾಮದಲ್ಲಿ ಸರ್ಕಾರಿ ಜಾಗವಿಲ್ಲ ಎಂಬ ಸಬೂಬು ಹೇಳುತ್ತಿದ್ದರೆಯೇ ಹೊರತು, ಸ್ಮಶಾನ ಭೂಮಿ ಒದಗಿಸಲು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ಬಸವರಾಜ ಗುಡಾಪುರ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಈ ಪ್ರದೇಶವು ನಗರದ ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಎಪಿಎಂಸಿ ಬಳಿ ಇದೆ. ಇಲ್ಲಿನ ನಿವಾಸಿಗಳು ಸುಮಾರು 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಅಂದಾಜು 20,000 ಕುಟುಂಬಗಳು ವಾಸವಾಗಿದ್ದು, ಅಂತ್ಯಕ್ರಿಯೆ ನಡೆಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ನಿವಾಸಿಗಳು ತಮ್ಮ ಜಾತಿ ಮತ್ತು ಧರ್ಮದ ಆಚರಣೆಗಳ ಪ್ರಕಾರ ಶವಗಳನ್ನು ಹೂಳಲು ಅಥವಾ ದಹನ ಮಾಡಲು ಯಾವುದೇ ರೀತಿಯ ಆಶ್ರಯ, ನೀರು ಅಥವಾ ಸಾಕಷ್ಟು ಸ್ಥಳಾವಕಾಶವಿಲ್ಲದೆ ಖಾಸಗಿ ಭೂಮಿಯಲ್ಲಿ ಅಂತ್ಯಕ್ರಿಯೆ ವಿಧಿಗಳನ್ನು ನಡೆಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ತಮ್ಮ ಊರಿನನವರೇ ಆದ ಸ್ವಾಮೀಜಿಯೊಬ್ಬರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ. ಅವರು ಈವರೆಗೂ ಯಾವುದೇ ಸಮಸ್ಯೆ ಮಾಡಿಲ್ಲ. ಒಂದು ವೇಳೆ ಸಮಸ್ಯೆ ಎದುರಾದರೆ ಅಂತ್ಯಕ್ರಿಯೆ ನಡೆಸಲು ಪರದಾಡುವಂತಾಗುತ್ತದೆ. ನಮಗೆ ಸ್ಮಶಾನ ಭೂಮಿಯನ್ನು ಒದಗಿಸಿ” ಎಂದು ಮನವಿ ಮಾಡಿದರು.
ಸ್ಥಳೀಯ ನಿವಾಸಿ ಪ್ರಕಾಶ ಮಾಯಕರ್ ಮಾತನಾಡಿ, “ಬಹುತೇಕ ವರ್ಷಗಳಿಂದ ಗ್ರಾಮದಲ್ಲಿ ಸ್ಮಶಾನ ಜಾಗವಿಲ್ಲದೆ ಪರದಾಡುವಂತಾಗಿದ್ದು, ನಮ್ಮ ಊರಿನವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿದ್ದೇವೆ. ಅಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲ. ಕೇವಲ 20 ಗುಂಟೆ ಜಮೀನಿನಲ್ಲಿಯೇ ಅಂತ್ಯಕ್ರಿಯೆ ಮಾಡುವಂತಾಗಿದೆ. ಈ ಬಗ್ಗೆ ಸಚಿವ ಸಂತೋಷ್ ಲಾಡ್ ಅವರಿಗೂ ಮನವಿ ನೀಡಿದ್ದೇವೆ” ಎಂದು ಈ ದಿನ.ಕಾಮ್ಗೆ ತಿಳಿಸಿದರು.
“ಖಾಸಗಿ ಭೂಮಿಯಲ್ಲಿ ಅಂತಿಮ ವಿಧಿಗಳನ್ನು ನಡೆಸುತ್ತಿದ್ದು, ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ಮಶಾನ ಭೂಮಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಗ್ರಾಮ ಲೆಕ್ಕಿಗರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಮಶಾನ ಭೂಮಿಗೆ ಗ್ರಾಮದಲ್ಲಿ ಯಾವುದೇ ಸರ್ಕಾರಿ ಭೂಮಿ ಇಲ್ಲವೆಂದು ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಭೂ ಪರಿಶೀಲನೆಯನ್ನು ಗಂಭೀರವಾಗಿ ಪರಿಗಣಿಸದೆ ತರಾತುರಿಯಲ್ಲಿ ವರದಿ ಸಲ್ಲಿಸಿದೆ. ನಮ್ಮ ಹಳ್ಳಿಯಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ, ಅವರು ಹತ್ತಿರದ ಸ್ಥಳಗಳಲ್ಲಿ ಹುಡುಕಲಿ. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ” ಎಂದು ಬೈರಿದೇವರಕೊಪ್ಪದ ನಿವಾಸಿಯೊಬ್ಬರು ತಿಳಿಸಿದ್ದಾರೆ.
“ಕಳೆದ ಕೆಲವು ವರ್ಷಗಳಿಂದ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಜಿಲ್ಲಾಡಳಿತ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಗ್ರಾಮದ ರೈತರು ಎಪಿಎಂಸಿಗೆ ಭೂಮಿಯನ್ನು ನೀಡಿದ್ದಾರೆ. ಆದರೆ, ಸ್ಮಶಾನಕ್ಕೆ ಭೂಮಿ ಸಿಗುತ್ತಿಲ್ಲ. ಹಾಗಾಗಿ ನಮ್ಮ ಊರಿನಲ್ಲಿ ಒಂದು ಕೆರೆಯಿದ್ದು, ಅದು ಕೆಟ್ಟ ಸ್ಥಿತಿಯಲ್ಲಿದೆ. ಆದ್ದರಿಂದ ಅದನ್ನೇ ಸ್ಮಶಾನವಾಗಿ ಅಭಿವೃದ್ಧಿಪಡಿಸಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂ.35ರ ಜನಪ್ರತಿನಿಧಿ ಮಲ್ಲಿಕಾರ್ಜುನ ಗುಂಡೂರ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸ್ಮಶಾನಕ್ಕೆ ಜಾಗ ಮಂಜೂರು ಮಾಡುವಂತೆ ಕೋರಿ ಹುಬ್ಬಳ್ಳಿ ತಹಶೀಲ್ದಾರ್ಗೆ ಪತ್ರ ಬರೆದಿದ್ದೇನೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರೊಂದಿಗೂ ಚರ್ಚಿಸುತ್ತೇನೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ನಿಫಾ ವೈರಸ್ ಆತಂಕ; ರೋಗ ಲಕ್ಷಣ, ತಡೆಗಟ್ಟುವ ವಿಧಾನದ ಮಾಹಿತಿ
“ತಹಶೀಲ್ದಾರರಿಗೆ ಕೇಳಿದರೆ, ಭೂಮಿಯನ್ನು ಗುರುತು ಮಾಡಿ, ಸ್ಮಶಾನ ಭೂಮಿಗೆ ಮಂಜೂರು ಮಾಡುತ್ತೇವೆ ಎನ್ನುತ್ತಾರೆ. ಗ್ರಾಮದಲ್ಲಿ ಯಾವುದೇ ಸರ್ಕಾರಿ ಭೂಮಿಯಿಲ್ಲ. ಇದರಿಂದ ಏನೂ ತೋಚದಂತಾಗಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ, ಸ್ಮಶಾನ ಭೂಮಿ ಪಡೆಯಲು ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಹುಬ್ಬಳ್ಳಿ ನಗರದ ವಾರ್ಡ್ ಸಂಖ್ಯೆ 35ರ ಬೈರಿದೇವರಕೊಪ್ಪ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಮಶಾನದ ಕೊರತೆಯಿಂದಾಗಿ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ನಿವಾಸಿಗಳು ಅನೇಕ ವರ್ಷಗಳಿಂದ ರೈತರಿಗೆ ಸೇರಿದ ಖಾಸಗಿ ಭೂಮಿಯಲ್ಲಿ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಮಶಾನಕ್ಕೆ ಭೂಮಿ ಒದಗಿಸಲು ವಿಫಲರಾಗಿದ್ದಾರೆ.
ಈ ಕುರಿತು ಈ ದಿನ.ಕಾಮ್ ಹುಬ್ಬಳ್ಳಿ ನಗರ ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ ಅವರು ಲಭ್ಯವಾಗಿಲ್ಲ.