- ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳ ವಿಲೀನಕ್ಕೆ ಶಾಸಕರಿಂದ ಸಲಹೆ
- ಮಕ್ಕಳಿಗೆ ಯಾವುದೇ ವಿಚಾರ ಹೇರಿಕೆ ಮಾಡುವುದು ಶಿಕ್ಷಣ ಇಲಾಖೆ ಕೆಲಸವಲ್ಲ
ಮಕ್ಕಳ ಸಂಖ್ಯೆ ಕಡಿಮೆ ಇರುವ ಕಡೆ ಶಿಕ್ಷಕರಿಗೆ ಕೆಲಸವೇ ಇಲ್ಲದಂತಾಗಿದೆ. ಮಕ್ಕಳಿಗೂ ಶಾಲಾ ವಾತಾವರಣ ಹಿತಕರವಾಗಿರುವುದಿಲ್ಲ. ಸಾರಿಗೆ ವ್ಯವಸ್ಥೆ ಅನುಕೂಲ ಇರುವ ಕಡೆ ಮಕ್ಕಳ ಸಂಖ್ಯೆ ಇರುವ ಶಾಲೆಗಳನ್ನು ವಿಲೀನ ಮಾಡಿದರೆ ಅನುಕೂಲ ಎಂದು ಶಾಸಕರಿಂದ ಸಲಹೆ ಬಂದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಸರ್ಕಾರಿ ಶಾಲೆಗಳ ಬಲವರ್ಧನೆಗೆ ಆದ್ಯತೆ ನೀಡಲಾಗುವುದು. ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಯಾವ ರೀತಿಯ ಶಿಕ್ಷಣ ಬೇಕು. ಅದನ್ನು ಕೊಡುವುದು ನಮ್ಮ ಕೆಲಸ. ವಿಲೀನ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳೊಂದಿಗೂ ಚರ್ಚೆ ಮಾಡುವೆ” ಎಂದರು.
“ಮಕ್ಕಳಿಗೆ ಯಾವುದೇ ವಿಚಾರಗಳನ್ನು ಹೇರಿಕೆ ಮಾಡುವುದು ಶಿಕ್ಷಣ ಇಲಾಖೆ ಕೆಲಸವಲ್ಲ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಈಗಾಗಲೇ ಆದ್ಯತೆ ನೀಡಲಾಗಿದೆ. ಪಬ್ಲಿಕ್ ಶಾಲೆಗಳನ್ನು ಹೆಚ್ಚಾಗಿ ಆರಂಭಿಸುವ ದಿಸೆಯಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. ಪ್ರತಿ ಜಿಲ್ಲೆಯ ಪ್ರವಾಸ ಮಾಡುತಿದ್ದು, ಸರ್ಕಾರಿ ಶಾಲೆಗಳ ಮೂಲಸೌಕರ್ಯದ ಬಗ್ಗೆ ವರದಿ ತರಿಸಿಕೊಂಡು ಹೆಚ್ಚಿನ ಅನುದಾನ ಒದಗಿಸುವೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸ್ಥಳಾಂತರ ಬೇಡ: ಎಚ್ ಡಿ ಕುಮಾರಸ್ವಾಮಿ
ರಾಜ್ಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಮಾತನಾಡಿ, “ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ಕೆಲಸ ನಡೆಯುತ್ತಿವೆ. ಎನ್.ಇ.ಪಿ ರದ್ದು ಮಾಡುವುದರಿಂದ ಇಲಾಖೆಗೆ ಕೇಂದ್ರದ ಅನುದಾನ ಕೊರತೆ ಆಗಲಿದೆ. ಈ ಬಗ್ಗೆ ಕೇಂದ್ರದ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು” ಎಂದರು.
“ಡಯೆಟ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳ ಸಮರ್ಪಕ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ”ಎಂದು ತಿಳಿಸಿದರು.