2023ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ಬರುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಇದೀಗ ಉಪ ಚುನಾವಣೆ ನೆಪವೊಡ್ಡಿ ಮುಸ್ಲಿಂ ನಾಯಕರನ್ನು ಪಕ್ಷದಿಂದ ವಜಾ ಮಾಡುವ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ಮತ ಪಡೆದು, ಈಗ ಒಂದು ಕುಟುಂಬದ ಹಿತಾಸಕ್ತಿ ಕಾಯುವುದಕ್ಕಾಗಿ ಮುಸ್ಲಿಮ್ ನಾಯಕರ ತಲೆದಂಡಕ್ಕೆ ಮುಂದಾಗಿವುದು ಸರಿಯಲ್ಲ. ಇದುವರಿಗೆ ನಿಷ್ಠಾವಂತರಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಹಾಗೆ, ಶಾಮನೂರು ಶಿವಶಂಕರಪ್ಪ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ, ಇದುವರಿಗೆ ಯಾವುದೇ ಬೇಡಿಕೆ ಇರಿಸಿರಲಿಲ್ಲ. ಇದೀಗ ಗರಿಗೆದರಿದ ರಾಜಕಾರಣದಲ್ಲಿ ಅಲ್ಲಿಯ ಪ್ರಮುಖರು ಪ್ರಚಾರದಲ್ಲಿ ಭಾಗಿಯಾಗಿಲ್ಲ, ಟಿಕೆಟ್ ಆಕಾಂಕ್ಷಿಗಳಾದರು, ಪ್ರಚಾರದಲ್ಲಿ ಅಂತರ ಕಾಯ್ದುಕೊಂಡರು ಎನ್ನುವ ಕಾರಣ ಮುಂದಿಟ್ಟು, ವಜಾ ಮಾಡುವ ಪ್ರವೃತ್ತಿಗೆ ಇಳಿದಿರುವುದು ಖಂಡನಿಯ.
ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಅನಿವಾರ್ಯವಲ್ಲ. ಅಗತ್ಯವಿದ್ದರೆ ಬೇರೆ ರಾಜಕೀಯ ಆಯ್ಕೆಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಇದು ಗಮನಕ್ಕೆ ಇರಲಿ. ಮೈಮರೆತರೆ ಇದರಿಂದಾಗುವ ಪರಿಣಾಮ ನೇರವಾಗಿ ಕಾಂಗ್ರೆಸ್ ಪಕ್ಷವೇ ಅನುಭವಿಸಲಿದೆ. ಅಲ್ಲದೇ, ಸಮುದಾಯ ಇವತ್ತಿಗೂ ಕೈಬಿಟ್ಟಿಲ್ಲ, ಅದನ್ನ ಮರೆತು ತಮ್ಮಿಚ್ಚೆಯಂತೆ ನಡೆದುಕೊಂಡರೆ ಅದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಮೌಲಾನ ಝಕಾವುಲ್ಲಾ ಮಾತನಾಡಿ, ‘ದಾವಣಗೆರೆ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮುಸ್ಲಿಂ ಮತದಾರರು ಇದ್ದು, ಅಲ್ಲಿ ಟಿಕೆಟ್ ಕೇಳಿರುವುದು ತಪ್ಪಲ್ಲ. ದೀರ್ಘಕಾಲದಿಂದ ಅನ್ಯಾಯ ಅನುಭವಿಸುತ್ತಿರುವ ಮುಸ್ಲಿಮರು ತಮ್ಮ ಹಕ್ಕನ್ನು ಕೇಳಿದ್ದಾರೆ ಎಂದರು. ಟಿಕೆಟ್ ನೀಡದ ಹಿನ್ನೆಲೆ ಮತದಾರರು ಹಾಗೂ ಮುಖಂಡರಲ್ಲಿ ಅಸಮಾಧಾನ ಉಂಟಾಗಿರುವುದು ಸಹಜ. ಆದಾಗ್ಯೂ, ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲವೆಂದು ಸ್ಪಷ್ಟಪಡಿಸಿದರು”.
“ಉಪ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಮುಸ್ಲಿಂ ನಾಯಕರನ್ನು ಅಧಿಕಾರದಿಂದ ಕಿತ್ತೊಗೆಯುತ್ತಿರುವ ಕ್ರಮವು ಇಡೀ ಸಮುದಾಯಕ್ಕೆ ಅವಮಾನಕಾರಿಯಾಗಿದೆ. ತಕ್ಷಣವೇ ಈ ನಿರ್ಧಾರವನ್ನು ಪರಿಷ್ಕರಿಸಿ ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಮರುಸ್ಥಾನಮಾನ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು” ಎಂದು ಎಚ್ಚರಿಸಿದರು.
ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮ್ಮದ್ ಮಾತನಾಡಿ, “ರಾಜ್ಯದಲ್ಲಿ ಶೇ.14ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ದಾವಣಗೆರೆ ಕ್ಷೇತ್ರದಲ್ಲಿಯೂ ಗಣನೀಯ ಮತದಾರರು ಇದ್ದಾರೆ. ಹೀಗಾಗಿ, ಟಿಕೆಟ್ ಕೇಳಿರುವುದು ಸಹಜ. ಆದರೆ, ಕಾಂಗ್ರೆಸ್ ಪಕ್ಷ ಅವರ ಮನವಿಯನ್ನು ಪರಿಗಣಿಸದೇ ಇರುವುದರಿಂದ ಅಸಮಾಧಾನ ಹೆಚ್ಚಾಗಿದೆ. ಮುಸ್ಲಿಂ ಸಮುದಾಯದ ವಿರುದ್ಧ ಪದೇ ಪದೇ ಅನ್ಯಾಯ ನಡೆಯುತ್ತಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಇತಿಹಾಸ ಇರುವವರ ಮೇಲೆ ಕ್ರಮ ಕೈಗೊಳ್ಳದೇ, ಮುಸ್ಲಿಂ ನಾಯಕರ ಮೇಲಷ್ಟೇ ಕ್ರಮ ಕೈಗೊಳ್ಳುತ್ತಿರುವುದು ಪ್ರಶ್ನಾರ್ಹ. ಸಮುದಾಯ ಮೌನವಾಗಿದೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಬಾರದು” ಎಂದು ಅವರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಾಗೃತ ಕರ್ನಾಟಕ ಸಂಘಟನೆಯಿಂದ ಯುವಜನರಿಗೆ ಏ.20ರಂದು ಭಾಷಣ–ಪ್ರಬಂಧ ಸ್ಪರ್ಧೆ
ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಫಯಾಝ್ ಅಹಮದ್, ಮೌಲಾನ ಅರ್ಷದ್, ಮೌಲಾನ ಝಿಯಾವುಲ್, ಮುಪ್ತಿ ಸೈಯದ್ ತಾಜುದ್ದೀನ್ ಸಾಹೇಬ್, ಮೌಲಾನ ಅಬು ಅಯ್ಯಬ್ ಅನ್ಸಾರಿ, ಸೈಯದ್ ಇಬ್ರಾಹಿಂ, ಎನ್.ಎಂ. ಮರ್ಚೆಂಟ್ ಸೇರಿದಂತೆ ಇನ್ನಿತರರು ಇದ್ದರು.






