ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದೆ. ತಾಲೂಕಿನ ಪ್ರಸಿದ್ಧ ಕಾಸರಕೋಡ ಕಡಲತೀರವು ಸತತ ಆರನೇ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಬ್ಲೂ ಫ್ಲಾಗ್’ (Blue Flag) ಮಾನ್ಯತೆಯನ್ನು ಪಡೆದುಕೊಂಡಿದೆ.
ಈ ಸಂಭ್ರಮದ ಹಿನ್ನೆಲೆಯಲ್ಲಿ ಭಾನುವಾರ ಕಡಲತೀರದಲ್ಲಿ ಅಧಿಕೃತವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್ ಅವರು ಬ್ಲೂ ಫ್ಲಾಗ್ ಧ್ವಜವನ್ನು ಏರಿಸುವ ಮೂಲಕ ಈ ಗೌರವವನ್ನು ಅಧಿಕೃತಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವರ್ಷ ಭಾರತದಾದ್ಯಂತ ಒಟ್ಟು 14 ಕಡಲತೀರಗಳು ಈ ಮಾನ್ಯತೆಗೆ ಪಾತ್ರವಾಗಿವೆ. ಕರ್ನಾಟಕದಿಂದ ಆಯ್ಕೆಯಾಗಿರುವ ಮೂರು ಕಡಲತೀರಗಳಲ್ಲಿ ಕಾಸರಕೋಡ ಕೂಡ ಒಂದಾಗಿದ್ದು, ಸತತವಾಗಿ ಆರನೇ ವರ್ಷವೂ ಈ ಸ್ಥಾನ ಉಳಿಸಿಕೊಂಡಿರುವುದು ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ | ‘ಪ್ರಾಜೆಕ್ಟ್ ಸೀಬರ್ಡ್’ನಿಂದ ಆರ್ಥಿಕ ಚೇತನ: ಸಾವಿರಾರು ಮಂದಿಗೆ ಉದ್ಯೋಗ, ಸ್ಥಳೀಯ ಜೀವನಮಟ್ಟ ಏರಿಕೆ
ಗೌರವಕ್ಕೆ ಕಾರಣವಾದ ಅಂಶಗಳು: ಕಡಲತೀರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಸ್ವಚ್ಛತೆ, ಪ್ರವಾಸಿಗರ ಭದ್ರತೆಗಾಗಿ ನಿಯೋಜಿಸಲಾದ ಜೀವ ರಕ್ಷಕರು (Life Guards), ಸುಸಜ್ಜಿತ ಮೂಲಸೌಕರ್ಯಗಳು ಮತ್ತು ಪರಿಸರ ಸ್ನೇಹಿ ನೈಸರ್ಗಿಕ ವಸ್ತುಗಳ ಬಳಕೆಯನ್ನು ಪರಿಗಣಿಸಿ ಈ ಅಂತರಾಷ್ಟ್ರೀಯ ಮಾನ್ಯತೆಯನ್ನು ನೀಡಲಾಗಿದೆ.
ಕಡಲತೀರದ ಅಂದವನ್ನು ಕಾಪಾಡಲು ಭಾರತ ಸರ್ಕಾರದಿಂದ ವಿಶೇಷ ಸ್ವಚ್ಛತಾ ಯಂತ್ರಗಳನ್ನು ಒದಗಿಸಲಾಗಿದ್ದು, ಹೊರಗುತ್ತಿಗೆ ಸಿಬ್ಬಂದಿಗಳ ಮೂಲಕ ನಿರಂತರ ನಿರ್ವಹಣೆ ಮಾಡಲಾಗುತ್ತಿದೆ.
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಪುಷ್ಟಿ ನೀಡುವ ಉದ್ದೇಶದಿಂದ, ಮುಂದಿನ ದಿನಗಳಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಹಾಗೂ ಅಪ್ಸರಕೊಂಡ ಕಡಲತೀರಗಳನ್ನು ಕೂಡ ಬ್ಲೂ ಫ್ಲಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಇಲಾಖೆ ಯೋಜಿಸಿದೆ ಎಂದು ಮಂಗಳ ಗೌರಿ ಭಟ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಈ ಮಾನ್ಯತೆಯಿಂದಾಗಿ ಕಾಸರಕೋಡ ಕಡಲತೀರಕ್ಕೆ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಪ್ರವಾಸಿಗರ ಹರಿವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.





