ರೈತರ ವಿವಿಧ ಬೇಡಿಕೆಗಳ ಪರಿಹಾರಕ್ಕಾಗಿ ಬೃಹತ್ ಹೋರಾಟ ರೂಪಿಸಲು ಅಕ್ಟೋಬರ್ 5ರಂದು ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ ಹೇಳಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ʼರೈತ ಸಾಲಗಾರನಲ್ಲ, ಸರ್ಕಾರವೇ ರೈತರಿಗೆ ಬಾಕಿದಾರ. ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಜಗತ್ ವೃತ್ತದಿಂದ ರಂಗಮಂದಿರದವರೆಗೆ ಬೃಹತ್ ಮೆರವಣಿಗೆ ಮಾಡಲಾಗುವುದುʼ ಎಂದರು.
ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸದೆ ಎಲ್ಲ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಇದುವರೆಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್ಸು ಪಡೆಯದೇ ರೈತರಿಗೆ ಅನ್ಯಾಯ ಎಸಗುತ್ತಿದೆ. ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆಯನ್ನು ವಾಪಸ್ಸು ಪಡೆಯದೇ ಮುಂದುವರೆಸುತ್ತಿದೆʼ ಎಂದರು.
ʼಕೇಂದ್ರ ಸರ್ಕಾರದ ವಿದ್ಯುತ್ ನೀತಿಯನ್ನು ಜಾರಿಗೆ ತರಲು ಮುಂದಾಗಿ ಕೃಷಿ ಪಂಪ್ ಸೆಟ್ ರೈತರು ಆಧಾರ್ ಲಿಂಕ್ ಮಾಡಿ ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಲಕ್ಷಾಂತರ ಹೊರೆ ಅನುಭವಿಸುವ ನೀತಿಯನ್ನು ರೂಪಿಸಿದೆʼ ಎಂದು ಹೇಳಿದರು.
ಗಣಿಗಾರಿಕೆಗೆ ಅವಕಾಶ ನೀಡಿ ಗಣಿ ಸುತ್ತಮುತ್ತ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ರಾಜ್ಯದ ನಾನಾ ಕಡೆಗೆ ವ್ಯವಸಾಯ ಯೋಗ್ಯ ಭೂಮಿಯನ್ನು ಸಿ ಮತ್ತು ಡಿ ಭೂಮಿ ಎಂದು ಘೋಷಿಸಿ ರೈತರನ್ನು ಒಕ್ಕಲೆಬ್ಬಿಸಿ ಅರಣ್ಯ ಬೆಳೆಸಲು ಅರಣ್ಯ ಇಲಾಖೆಗೆ ವಹಿಸುತ್ತಿದೆ. ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶಾಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ, ಇತರೆ ಅಭಿವೃದ್ಧಿ ನೆಪದಲ್ಲಿ ಲಂಗು ಲಗಾಮಿಲ್ಲದೇ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆʼ ಎಂದು ದೂರಿದರು.
ʼವಿಧಾನಸೌಧ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬರ ಮತ್ತು ಅತಿವೃಷ್ಟಿಯಿಂದಾದ ನಷ್ಟ ಪರಿಹಾರವನ್ನು ಇದುವರೆಗೂ ಕೊಟ್ಟಿಲ್ಲ. ಎರಡ್ಮೂರು ವರ್ಷಗಳು ಕಳೆದರೂ ಪ್ರಧಾನಮಂತ್ರಿ ಫಸಲ್ ಭೀಮಾ ಹಣ ರೈತರ ಖಾತೆಗೆ ಜಮಾ ಆಗಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ರೈತ ಸಂಘ ಮತ್ತಷ್ಟು ಬಲಗೊಳಿಸಿ ಚಳುವಳಿ ಬಲಿಷ್ಠಗೊಳಿಸಬೇಕಾಗಿದೆ. ಪ್ರತಿ ರೈತ ಕುಟುಂಬಕ್ಕೊಬ್ಬ ಸದಸ್ಯ- ಊರಿಗೊಬ್ಬ ಕಾರ್ಯಕರ್ತ ಎಂಬ ಉದ್ದೇಶದೊಂದಿಗೆ ಪ್ರತಿ ಹಳ್ಳಿಯಲ್ಲಿಯೂ ಸಂಘಟನೆಯನ್ನು ಕಟ್ಟಿ ಬೆಳೆಸಬೇಕಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಸ್ಥಳೀಯವಾಗಿ ದೊಡ್ಡ ಹೋರಾಟವನ್ನು ರೂಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆʼ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ಸೈಟು ಹಿಂದಿರುಗಿಸಲು ನಿರ್ಧರಿಸಿದ ಸಿಎಂ ಸಿದ್ದರಾಮಯ್ಯ ಪತ್ನಿ
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ರಾಗಿ, ಫಾತಿಮಾ ಪಟೇಲ್, ಸಿದ್ದು ಎಸ್.ಎಲ್., ಕರೆಪ್ಪ ಕರಗೊಂಡ್ ಇದ್ದರು.