12 ವರ್ಷದ ಹುಡುಗನೋರ್ವನ ಕುತ್ತಿಗೆಯ ಮೂಲಕ ಎದೆಯ ತನಕ ಹೊಕ್ಕಿದ್ದ ತೆಂಗಿನ ಗರಿಯನ್ನು ಸುದೀರ್ಘ ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ವೈದ್ಯರು ಬಾಲಕನ ಜೀವ ಉಳಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಅಸ್ಸಾಂ ರಾಜ್ಯದ ಗುವಾಹಟಿ ಮೂಲದವನಾದ ಬಾಲಕ ಕಮಲ್ ಹುಸೇನ್(12) ಎಂಬಾತನ ಪೋಷಕರು ಕೊಡಗು ಜಿಲ್ಲೆಯ ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ(ಶನಿವಾರ) ಸಂಜೆಯ ಬಾಲಕ ಮನೆಯ ಬಳಿ ಆಟವಾಡುತ್ತಿದ್ದಾಗ ಹತ್ತಿರವೇ ಇದ್ದ ತೆಂಗಿನಮರದ ಗರಿಯೊಂದು ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು.
ಅವಘಡದಿಂದಾಗಿ ತೆಂಗಿನಗರಿಯ ಕೊಂಬೆಯ ಭಾಗವೊಂದು ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯ ಒಳಗಡೆಗೆ ಹೊಕ್ಕಿತ್ತು. ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹುಡುಗನಿಗೆ ಪ್ರಾಥಮಿಕ ಚಿಕಿತ್ಸೆಯ ಬಳಿಕ ಕೂಡಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಶನಿವಾರ ರಾತ್ರಿ 6.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ರಾತ್ರಿ 12.15ರ ಸುಮಾರಿಗೆ ವೆನ್ಲಾಕ್‌ಗೆ ಕರೆತರಲಾಗಿತ್ತು.

ಈ ಪ್ರಕರಣವನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿದ ವೆನ್ಲಾಕ್ ಆಸ್ಪತ್ರೆಯ ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಕರಾದ (Cardiothoracic and Vascular Surgery) ಡಾ. ಸುರೇಶ್ ಪೈ ನೇತೃತ್ವದ ತಂಡವು, ವೈದ್ಯಕೀಯ ಕೌಶಲ್ಯದ ಮೂಲಕ 12 ವರ್ಷದ ಹುಡುಗನ ಎದೆಗೆ ತೆಂಗಿನ ಮರದ ಗರಿ ಹಾಗೂ ಜೊತೆಗೆ ಹೊಕ್ಕಿದ್ದ ಸ್ಟೀಲ್ ಚೈನ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಈ ಬಗ್ಗೆ ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿದ ಡಾ. ಸುರೇಶ್ ಪೈ, “ಅಂದಾಜು 20 ಸೆಂ.ಮೀಟರ್ ಉದ್ದದ ದೊಡ್ಡ ಮರದ ತುಂಡು ಮತ್ತು ಬ್ಲೇಡ್‌ನಂತಹ ಡಿಸೈನ್ ಇರುವ ಸ್ಟೀಲ್ ಚೈನ್ ಬಾಲಕನ ಎದೆಯ ತನಕ ಹೊಕ್ಕಿತ್ತು. ಸುಮಾರು ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಬಾಲಕ ಈಗ ಐಸಿಯುನಲ್ಲಿದ್ದು, ಸುಧಾರಿಸಿಕೊಳ್ಳುತ್ತಿದ್ದಾನೆ” ಎಂದು ಮಾಹಿತಿ ನೀಡಿದರು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಅಧೀಕ್ಷಕರಾದ ಡಾ. ಶಿವಪ್ರಕಾಶ್ ಮಾತನಾಡಿ, “ಶನಿವಾರ ರಾತ್ರಿ 6.30ರ ಸುಮಾರಿಗೆ ಈ ಅವಘಡ ಸಂಭವಿಸಿತ್ತು ಎಂದು ಪೋಷಕರು ಮಾಹಿತಿ ನೀಡಿದ್ದಾರೆ. ರಾತ್ರಿ 12.15ರ ಸುಮಾರಿಗೆ ವೆನ್ಲಾಕ್‌ಗೆ ಕರೆತರಲಾಗಿತ್ತು. ಮಧ್ಯರಾತ್ರಿ 1.30ರಿಂದ ಮುಂಜಾನೆ 3.30ರವರೆಗೆ ಶಸ್ತ್ರಚಿಕಿತ್ಸೆ ನಡೆಸಿರುವ ಡಾ. ಸುರೇಶ್ ಪೈ ನೇತೃತ್ವದ ನಮ್ಮ ವೈದ್ಯರ ತಂಡವು ಬಾಲಕನ ಜೀವ ಉಳಿಸುವಲ್ಲಿ ಸಫಲರಾಗಿದ್ದಾರೆ” ಎಂದು ಈದಿನ ಡಾಟ್ ಕಾಮ್‌ಗೆ ತಿಳಿಸಿದರು.
“ನಮ್ಮ ವೈದ್ಯರ ತಂಡ ನಡೆಸಿರುವುದು ಬಹಳ ಅಪರೂಪದ ಶಸ್ತ್ರಚಿಕಿತ್ಸೆ. ಒಂದು ವೇಳೆ ಇದು ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ್ದಿದ್ದರೆ 10 ಲಕ್ಷದವರೆಗೆ ಖರ್ಚಾಗುತ್ತಿತ್ತು. ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಯಾವುದೇ ಖರ್ಚಿಲ್ಲದೆ ನಡೆಸಲಾಗಿದೆ” ಎಂದು ತಿಳಿಸಿದರು.

“ಮರದ ತುಂಡು ಮತ್ತು ಚೈನನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ನಂತರ ಹುಡುಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಸಿಟಿವಿಎಸ್ ವಿಭಾಗದ ಇಡೀ ತಂಡದ ಅಸಾಧಾರಣ ಕೌಶಲ್ಯವು ಪ್ರಶಂಸೆಗೆ ಅರ್ಹವಾದದ್ದು. 12 ವರ್ಷದ ಬಾಲಕನ ಜೀವವನ್ನು ಉಳಿಸಲು ಗಮನಾರ್ಹ ಪ್ರಯತ್ನ ನಡೆಸಿದ್ದಕ್ಕಾಗಿ ಇಡೀ ತಂಡ, ಶಸ್ತ್ರಚಿಕಿತ್ಸಾ ವಿಭಾಗದ ಸಿಬ್ಬಂದಿ ಮತ್ತು ಅರಿವಳಿಕೆ ತಂಡವನ್ನೂ ಕೂಡ ಅಭಿನಂದಿಸುತ್ತೇನೆ” ಎಂದು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ: ವಿಶೇಷ ಚೇತನ ಮಗುವಿನೊಂದಿಗೆ ಬೀದಿಗೆ ಬಿದ್ದ ಕುಟುಂಬ!
ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಬಾಲಕನ ಕುಟುಂಬದ ಸದಸ್ಯರಾದ ತಸರ್ ಅಲಿ, “ನಿನ್ನೆ ಸಂಜೆ 6.30ರ ವೇಳೆ ಮನೆಯ ಸಮೀಪದಲ್ಲಿ ಹುಸೇನ್ ಆಟವಾಡುತ್ತಿದ್ದ. ಈ ವೇಳೆ ದಿಢೀರನೇ ಬಿದ್ದ ತೆಂಗಿನ ಮರದ ಗರಿ ನೇರವಾಗಿ ಕುತ್ತಿಗೆ ಭಾಗಕ್ಕೆ ನುಗ್ಗಿತ್ತು. ಕೂಡಲೇ ಎಸ್ಟೇಟ್ ಮಾಲೀಕರ ವಾಹನದಲ್ಲಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದೆವು. ಅವರು ಕೂಡಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆ ತರುವಂತೆ ಸೂಚಿಸಿದ್ದಕ್ಕೆ ಇಲ್ಲಿ ಕರೆ ತಂದೆವು. ವೈದ್ಯರು ಸರ್ಜರಿ ನಡೆಸಿ, ಪ್ರಾಣ ಉಳಿಸಿದ್ದಾರೆ” ಎಂದು ತಿಳಿಸಿದರು.
ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತಮ್ಮ ಮಗನ ಜೀವ ಉಳಿಸಿರುವ ವೆನ್ಲಾಕ್ ಆಸ್ಪತ್ರೆಯ ಎಲ್ಲ ವೈದ್ಯರಿಗೆ ಅಸ್ಸಾಂ ಮೂಲದ ಬಾಲಕನ ಪೋಷಕರಾದ ಅನ್ವರ್ ಹಾಗೂ ಅಸ್ಮಾ ಖಾತೂನ್ ಧನ್ಯವಾದ ಸಲ್ಲಿಸಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.