ತಮ್ಮ ಜೀವದ ಹಂಗು ತೊರೆದು, ದಿನಗೂಲಿ ನೌಕರರಾಗಿ ಅರಣ್ಯ ರಕ್ಷಣೆ ಮಾಡುತ್ತಿದ್ದ ನೌಕರರನ್ನು ಏಕಾಏಕಿ ಅರಣ್ಯ ಇಲಾಖೆ ಹೊರಗುತ್ತಿಗೆ ವಿಭಾಗಕ್ಕೆ ಸೇರಿಸಿರುವುದನ್ನು ವಿರೋಧಿಸಿ ದಿನಗೂಲಿ ನೌಕರರು ಅರಣ್ಯ ಇಲಾಖೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 14 ಜನ ಕಳೆದ 25-30 ವರ್ಷದಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೂ ಇವರು ನಮೂನೆ-ಎಫ್‌ಎಸಿ-63ರಡಿಯಲ್ಲಿ ಸರ್ಕಾರದಿಂದ ನೇರವಾಗಿ ಸಂಬಳ ಪಡೆಯುತ್ತಿದ್ದರು. ಇದೀಗ ಅರಣ್ಯ ಇಲಾಖೆ 14 ದಿನಗೂಲಿ ನೌಕರರನ್ನೂ ಗುತ್ತಿಗೆ ವಿಭಾಗಕ್ಕೆ ಸೇರಿಸಿ ಗುತ್ತಿಗೆಯವರಿಂದ ಸಂಬಳ ಪಡೆಯುವಂತೆ ಮಾಡಿದೆ. ಈ ನಿರ್ಧಾರ ದಿನಗೂಲಿ ನೌಕರರ ಬದುಕು ಅತಂತ್ರವಾಗುವಂತೆ ಮಾಡಿದೆ.

ಮಾಧ್ಯಮದೊಂದಿಗೆ ಮಾತನಾಡಿದ ದಿನಗೂಲಿ ನೌಕರ ಮಂಜುನಾಥ್ ನಾಯ್ಕ್, “ದಿನಗೂಲಿ ನೌಕರರಿಗೆ ಸದ್ಯ ತಿಂಗಳ ಸಂಬಳ ನೌಕರರ ಅಕೌಂಟ್ ಗಳಿಗೆ ನೇರವಾಗಿ ಬರುತ್ತಿದೆ. ಆದರೆ, ಈಗ ಹಣ ದೋಚುವ ದುರುದ್ದೇಶದಿಂದ ಹೊರಗುತ್ತಿಗೆಯನ್ನ ಜಾರಿ ಮಾಡಿದ್ದಾರೆ. ಹೊರಗುತ್ತಿಯಲ್ಲಿ 10 ಜನರು ಮಾಡುವ ಕೆಲಸವನ್ನ 5 ಜನರ ಕೈಯಲ್ಲಿ ಮಾಡಿಸಿ 5 ಜನರ ಹಣವನ್ನ ಲೂಟಿ ಮಾಡುತ್ತಾರೆ. ಹೊರಗುತ್ತಿಗೆಯಲ್ಲಿ ನಮ್ಮನ್ನು ಕೇಳುವರೇ ಇಲ್ಲದ ಪರಿಸ್ಥಿತಿ ಇದೆ. ಪ್ರಾಣದ ಹಂಗು ತೊರೆದು ಅರಣ್ಯ ಕಾಪಾಡುತ್ತೇವೆ. ಈ ವೇಳೆ ನಮ್ಮ ಪ್ರಾಣಕ್ಕೆ ಹಾನಿಯಾದರೆ ನಮ್ಮ ಕುಟುಂಬಗಳಿಗೂ ಇವರು ಸುದ್ದಿ ತಿಳಿಸುವುದಿಲ್ಲ. ಹೊರಗುತ್ತಿಗೆಯವರನ್ನ ಕೇಳಿದ್ರೆ ಅರಣ್ಯ ಇಲಾಖೆಯ ಜವಾಬ್ದಾರಿ ಅಂತಾರೆ, ಅರಣ್ಯ ಇಲಾಖೆ ಕೇಳಿದ್ರೆ ಹೊರಗುತ್ತಿಗೆ ನೌಕರರೆಂದು ಸಬೂಬು ಹೇಳ್ತಾರೆ. ನುಣುಕಿಕೊಳ್ಳುವುದಕ್ಕಾಗಿಯೇ ಹೊರಗುತ್ತಿಗೆ ನಿಯಮ ತಂದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.