ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ (ಮೇಲುಕೋಟೆ ವಿಧಾನಸಭಾ ಕ್ಷೇತ್ರ) ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದ ಜನರಲ್ಲಿ ದರಖಾಸ್ತು ಜಮೀನು ಸಕ್ರಮ ಮಾಡಿಸಿಕೊಡುತ್ತೇವೆ ಎನ್ನುವ ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದರಖಾಸ್ತು ಜಮೀನು ಕೊಡಿಸುವುದಾಗಿ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿದೆ. ಆದ್ದರಿಂದ, ಮಧ್ಯವರ್ತಿಗಳ ಮಾತು ಕೇಳಿ ಮೋಸ ಹೋಗಬೇಡಿ. ಯಾವುದೇ ಕಾರಣಕ್ಕೂ ಹಣ ನೀಡಬೇಡಿ ಎಂದಿದ್ದಾರೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ರ ನಿಯಮ 97 ರೀತಿ 30 ಎಕರೆ ಗೋಮಾಳದ ಜಮೀನನ್ನು ಕಾಯ್ದಿರಿಸುವಂತೆ ನಿಯಮವಿದೆ. ಅದರಂತೆ, ಪಾಂಡವಪುರ ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮಗಳ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಜಮೀನುಗಳ ಲಭ್ಯತೆ ಬಗ್ಗೆ ಪರಿಶೀಲಿಸಿ ಹೆಚ್ಚುವರಿ ಗೋಮಾಳ ಲಭ್ಯವಿರುವ 5 ಗ್ರಾಮಗಳಲ್ಲಿ ಮಾತ್ರ ಆನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಸರ್ಕಾರದ ನಿಗಧಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಸಕ್ರಮಗೊಳಿಸಲು ಅವಕಾಶವಿರುತ್ತದೆ.
ಅಕ್ರಮ ಸಾಗುವಳಿ ಮಾಡುತ್ತಿರುವ ಜಮೀನಿನ ಜೊತೆಗೆ ಅನಧಿಕೃತವಾಗಿ ಸಾಗುವಳಿ ಜಮೀನಿನ ವಿಸ್ತೀರ್ಣವು 4 ಎಕರೆ 38 ಗಂಟೆಗೆ ಮೀರಬಾರದೆಂದು ನಿಯಮಾವಳಿಯಲ್ಲಿ ತಿಳಿಸಲಾಗಿರುತ್ತದೆ. ಗೋಮಾಳ ಜಮೀನು ಲಭ್ಯವಿರುವ ಜಾಗಶೆಟ್ಟಿಹಳ್ಳಿ, ಗೌಡಗೆರೆ, ಆನುವಾಳು, ಹೊಸಹಳ್ಳಿ, ಸಿಂಗಾಪುರ ಗ್ರಾಮಗಳ ರೈತರಿಗೆ ಸಕ್ರಮಗೊಳಿಸಲು ಮಾತ್ರ ಅವಕಾಶವಿರುತ್ತದೆ.
ಉಳಿದಂತೆ ಹೊಸದಾಗಿ ಜಾನುವಾರು ಗಣತಿ ಪೂರ್ಣಗೊಂಡ ನಂತರ ಜಾನುವಾರುಗಳ ಸಂಖ್ಯೆಯ ಆಧಾರದ ಮೇಲೆ ಗೋಮಾಳವನ್ನು ಪುನರ್ ನಿಗದಿಪಡಿಸಬೇಕಾಗಿರುತ್ತದೆ. ಅಲ್ಲಿಯವರೆಗೂ ಬೇರೆ ಯಾವುದೇ ಜಮೀನನ್ನು ಮಂಜೂರಾತಿ ಮಾಡಲು ಅವಕಾಶವಿರುವುದಿಲ್ಲ.
ಈ ಸುದ್ದಿ ಓದಿದ್ದೀರಾ?ಕೊಡಗು | ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದಿಂದ ದೀಪಾ ಬಾಸ್ತಿಯವರಿಗೆ ಸನ್ಮಾನ
ಮೇಲ್ಕಂಡ 5 ಗ್ರಾಮಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ಸಾಗುವಳಿ ಮಾಡುತ್ತಿರುವುದನ್ನು ಸಕ್ರಮ ಮಾಡಿಸಿ ಕೊಡುತ್ತೇನೆಂದು ಆಮಿಷವೊಡ್ಡಿ ಬರುವ ಮಧ್ಯವರ್ತಿಗಳಿಂದ ದೂರವಿರಬೇಕೆಂದು ಪಾಂಡವಪುರ ತಾಲ್ಲೂಕಿನ ಜನರಲ್ಲಿ ವಿನಂತಿ ಮಾಡಿದರು.