- ‘ನಮ್ಮನ್ನು ಟ್ರೋಲ್ ಮಾಡುತ್ತಾರೆ ಎಂದು ಹಿಂಜರಿಕೆಯಲ್ಲಿ ಮಾತನಾಡಬೇಡಿ’
- ‘ನಾವು ದೊಡ್ಡ ಸ್ಥಾನಕ್ಕೆ ಏರಲು ಇಂತಹ ಟ್ರೋಲ್‌ಗಳ ಪಾತ್ರ ಇರುತ್ತದೆ’
ಯಾರೋ ನಮ್ಮನ್ನು ಟ್ರೋಲ್ ಮಾಡುತ್ತಾರೆ ಎಂಬ ಹಿಂಜರಿಕೆಯಲ್ಲಿ ಮಾತನಾಡಬೇಡಿ. ಟ್ರೋಲ್ ಮಾಡುವವರ ಬಗ್ಗೆ ಯಾವತ್ತೂ ಹೆದರಬೇಡಿ. ನಾನು ಈ ಸಭಾಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಬಂದು ಕುಳಿತುಕೊಳ್ಳಲು ಈ ಟ್ರೋಲ್ ಮಾಡಿದವರು ಕೂಡ ಕಾರಣ. ನಾವು ದೊಡ್ಡ ಸ್ಥಾನಕ್ಕೆ ತಲುಪಬೇಕಾದರೆ ಇಂತಹ ಟ್ರೋಲ್‌ಗಳ ಪಾತ್ರ ಇರುತ್ತದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಶಾಸಕರಿಗೆ ಮಾತನಾಡಲು ಸಭಾಧ್ಯಕ್ಷರು ಬುಧವಾರ ನಡೆದ ಎಂಟನೇ ದಿನದ ಕಲಾಪದಲ್ಲಿ ಅವಕಾಶ ಮಾಡಿಕೊಟ್ಟರು. ಈ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕ ಪ್ರದೀಪ್ ಈಶ್ವರ್ ಭಾಷಣ ಆರಂಭಿಸಿದರು. ಅವರ ಭಾಷಣದಲ್ಲಿನ ಹಿಂಜರಿಕೆ ಕಂಡ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ನೂತನ ಶಾಸಕರಿಗೆ ಮಾತನಾಡುವ ಬಗ್ಗೆ ಧೈರ್ಯತುಂಬಿ ಪ್ರೋತ್ಸಾಹಿಸಿದರು.
“ಹೊಸದಾಗಿ ಶಾಸಕರಾದವರು ಆತ್ಮವಿಶ್ವಾಸದಿಂದ ಮಾತನಾಡಬೇಕು. ಮಾತಿನಲ್ಲಿ ಹೆಚ್ಚು ಕಡಿಮೆ ಆದರೆ ತೊಂದರೆ ಇಲ್ಲ. ಇದೇನು ಪರೀಕ್ಷೆ ಅಥವಾ ಕೋರ್ಟ್ ಅಲ್ಲ. ಮುಕ್ತ ಮನಸ್ಸಿನಿಂದ, ಆರಾಮವಾಗಿ ಸಂವಿಧಾನಬದ್ಧವಾಗಿ ಮಾತನಾಡಿ” ಎಂದು ಸಭಾಧ್ಯಕ್ಷರು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ಖಾದರ್, ಕನ್ನಡ ಮತ್ತು ಬೆತ್ತಲಾದ ಬಿಜೆಪಿ
“ಎಲ್ಲ ನೂತನ ಶಾಸಕರು ತಮಗೇನು ಹೇಳಬೇಕು ಅನ್ನಿಸುತ್ತದೆಯೋ ಅದನ್ನು ಮುಕ್ತವಾಗಿ ಹೇಳಿ. ಸಕಾರಾತ್ಮಕ ವಿಚಾರಗಳನ್ನು ಸದನದಲ್ಲಿ ಧೈರ್ಯವಾಗಿ ಹೇಳಿ. ಯಾವುದಕ್ಕೂ ಹಿಂಜರಿಯಬೇಡಿ” ಎಂದು ಕಿವಿಮಾತು ಹೇಳಿದರು.
“ಬಡಕುಟುಂಬದ ಹುಡಗ ಕೂಡ ವಿಧಾನಸೌಧ ತಲುಪುವುದಕ್ಕೆ ಪ್ರೇರಣೆಯಾದ ಅಂಬೇಡ್ಕರ್, ಅನಾಥ ಹುಡುಗರಿಗೆ ಅನ್ನವಿಟ್ಟು ಬೆಳೆಸಿದಂತಹ ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸುತ್ತ ನನ್ನ ಭಾಷಣ ಪ್ರಾರಂಭಿಸಿರುವೆ” ಎಂದು ಪ್ರದೀಪ್ ಈಶ್ವರ್ ಮಾತು ಪ್ರಾರಂಭಿಸಿ ಅನ್ನಭಾಗ್ಯ ಯೋಜನೆ ಮತ್ತು ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ ಸದನದ ಗಮನ ಸೆಳೆದರು.