ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ಅಂತಿಮವಾಗಿ ಯಾವ ನಿರ್ಧಾರಕ್ಕೂ ಬಂದಿಲ್ಲ. ದಯವಿಟ್ಟು ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಎದುರು ಮಾತನಾಡಿದ ಅವರು, “ಸದ್ಯ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಯುತ್ತಿದೆ. ಎಲ್ಲ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಿರ್ಧಾರ ಕೈಗೊಂಡಾಗ ನಾವು ತಿಳಿಸುತ್ತೇವೆ. ಇನ್ನು 48 ರಿಂದ 72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ” ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಈಗ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಶಾಸಕಾಂಗ ಪಕ್ಷದ ನಾಯಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಇಂದು ಅಥವಾ ನಾಳೆ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಎಐಸಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ನಾಳೆ ಪ್ರಮಾಣವಚನ ಇರುವುದಿಲ್ಲ” ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕಳೆದೆರಡು ದಿನಗಳಿಂದ ಚರ್ಚೆ ನಡೆಸುತ್ತಿದ್ದಾರೆ. ಖರ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಪ್ರಧಾನಿ ಮೋದಿ ಇಂತಹ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು 10 ರಿಂದ 15 ದಿನ ತೆಗೆದುಕೊಳ್ಳುತ್ತಿದ್ದರು. ಸಂಪುಟದಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಪ್ರತೀ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಸುರ್ಜೇವಾಲ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಇದರಿಂದ ಹಲವೆಡೆ ಸಿದ್ದು ಅಭಿಮಾನಿಗಳು ಸಂಭ್ರಮಾಚರಣೆ ಕೂಡ ಮಾಡಿದ್ದರು. ಆದರೆ ಸುರ್ಜೇವಾಲ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.