- ‘ಪೊಲೀಸ್ ಅಧಿಕಾರಿಗಳಿಗೆ ಮರಿ ಖರ್ಗೆ ಕ್ಲಾಸ್ ತಗೊತಿದ್ದಾರೆʼ
- ‘ಗೃಹಖಾತೆ ಕೆಲಸ ಪ್ರಿಯಾಂಕ್ ಖರ್ಗೆ ಅವರಿಗೆ ಕೊಟ್ಟಿದ್ದಾರಾ?’
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ, ತಮ್ಮ ಖಾತೆಯ ಮೇಲೆ ಬೇಸರವೋ ತಿಳಿಯುತ್ತಿಲ್ಲ. ಅಥವಾ ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ್ ಖರ್ಗೆ ಅವರಿಗೆ ಕೊಟ್ಟಿದ್ದಾರೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ರೌಡಿಸಂ ಚಟುವಟಿಕೆ ನಿಯಂತ್ರಣದ ಬಗ್ಗೆ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜತೆ ಇತ್ತೀಚೆಗೆ ಸಭೆ ನಡೆಸಿರುವ ವಿಡಿಯೋ ಹಂಚಿಕೊಂಡು ಟೀಕಿಸಿದ್ದಾರೆ.
“ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ” ಎಂದು ಪ್ರಶ್ನಿಸಿದ್ದಾರೆ.
“ಡಾ. ಜಿ ಪರಮೇಶ್ವರ್ ಮತ್ತು ಪ್ರಿಯಾಂಕ್ ಖರ್ಗೆ ಅವರೇ, ಪೊಲೀಸ್ ಅಧಿಕಾರಿಗಳನ್ನು ಕಂಟ್ರೋಲ್ ಮಾಡುವ ಕೆಲಸ ಬಿಟ್ಟು, ದನಗಳ್ಳರ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಅಕ್ರಮ ಕಸಾಯಿಖಾನೆಗಳ ಮೇಲೆ ಕ್ರಮ ಕೈಗೊಳ್ಳಿ, ಲವ್ ಜಿಹಾದ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಿ, ಅಶಾಂತಿದೂತರ ಮೇಲೆ ಕ್ರಮ ಕೈಗೊಳ್ಳಿ, ಹಿಂದೂಪರ ಕಾರ್ಯಕರ್ತರ ಮೇಲೆ ಟಾರ್ಗೆಟ್ ಮಾಡೋದು ಬೇಡ” ಎಂದು ಎಚ್ಚರಿಸಿದ್ದಾರೆ.