ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಸಂವಿಧಾನ ಅಷ್ಟೇ ರಚನೆ ಮಾಡಲಿಲ್ಲ, ಬದಲಾಗಿ ಈ ದೇಶದ ಬಡ, ಶೋಷಿತರು ಸೇರಿದಂತೆ ತುಳಿತಕ್ಕೊಳಗಾದ ಸಮುದಾಯಗಳಿಗೆ ಹೆಣ್ಣು-ಗಂಡು ಭೇದವಿಲ್ಲದೆ ಸರ್ವರನ್ನು ಸಮನಾಗಿ ಕಾಣಲು ಹೋರಾಡಿದ ಸಾಮಾಜಿಕ ಕ್ರಾಂತಿಯ ಅಪ್ರತಿಮ ಹೋರಾಟಗಾರಾಗಿದ್ದರು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರಕಾರಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ನೌಕರರ ಸಂಘ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಡಾ.ಬಿ.ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನ ಅಂಗವಾಗಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ಭಾರತ ಕೇವಲ ಸ್ವಾತಂತ್ರ್ಯ ದೇಶ ಅಷ್ಟೇ ಅಲ್ಲದೆ ಗಣರಾಜ್ಯವಾಗಿದೆ. ಅಂಬೇಡ್ಕರವರು ಸಂವಿಧಾನ ರಚಿಸಿ ಅದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದರು. ಶಿಕ್ಷಣ ಮತ್ತು ಸಮಾನತೆಗೆ ಹೆಚ್ಚಿನ ಒತ್ತು ನೀಡಿದ ಬಾಬಾ ಸಾಹೇಬರು ಶಿಕ್ಷಣ ಮತ್ತು ಆರ್ಥಿಕ ತಜ್ಞರಾಗಿದ್ದರು. ನಾವೆಲ್ಲರು ಅಂಬೇಡ್ಕರ್ ಅವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರು ಶಿಕ್ಷಣ ಪಡೆದು ಸುಭದ್ರ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು” ಕರೆ ನೀಡಿದರು.
ಕಲಬುರಗಿ ಪದವಿ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ವಿಜಯಕುಮಾರ ಸಾಲಿಮನಿ ವಿಶೇಷ ಉಪನ್ಯಾಸ ನೀಡಿ, “ಭಾರತದಲ್ಲಿ ಜಾತಿ ಪದ್ಧತಿ ನಿರ್ಮೂಲನೆಗೆ ಅಂಬೇಡ್ಕರರು ಜೀವನದುದ್ದಕ್ಕೂ ಹೋರಾಡಿದರು. ಅಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿ ಇಡೀ ವಿಶ್ವವೇ ಮೆಚ್ಚುವಂತಹ ಶ್ರೇಷ್ಠ ಸಂವಿಧಾನ ಅವರು ನೀಡಿದ್ದಾರೆ” ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ದಾರ್ಥ ವಿಹಾರ ಟ್ರಸ್ಟ್ ನ ಬೌದ್ಧ ಬಿಕ್ಕು ಸಂಘಾನಂದ ಭಂತೇಜಿ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಬುದ್ಧ ವಂದನೆ ಸಲ್ಲಿಸಲಾಯಿತು.
ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ನಗರ ಪೊಲೀಸ್ ಆಯುಕ್ತ ಚೇತನಕುಮಾರ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಸೇರಿದಂತೆ ಇತರರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? Fact check | ಯತ್ನಾಳ್ ಹೇಳಿದ ಭಾರೀ ಸುಳ್ಳು: ಸಿಎಂ ವಿರುದ್ಧ ಆರೋಪ ಸುಳ್ಳೆಂಬುದಕ್ಕೆ ಇಲ್ಲಿದೆ ಸಾಕ್ಷಿ
ಕಾರ್ಯಕ್ರಮದಲ್ಲಿ ಡಿ.ಹೆಚ್.ಓ. ಡಾ.ರಾಜಶೇಖರ ಮಾಲಿ, ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಕರ್ನಾಟಕ ರಾಜ್ಯ ಸರ್ಕಾರಿ, ಅರೆಸರಕಾರಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬಳಿ, ಪದಾಧಿಕಾರಿಗಳಾದ ಸೋಮಶೇಖರ ಎಸ್. ಮದನಕರ್, ನಂದಿನಿ ಸನ್ಬಾಳ, ಜೈ ಭೀಮ್, ಜಮುನಾ ಟಿಳೆ, ಸುಮಂಗಲಾ ಸಂಗಾವಿ ಸೇರಿದಂತೆ ವಿವಿಧ ಸಮಾಜದ ಮುಖಂಡರು. ನೌಕರರು, ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.