ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)
“ನಿಮ್ಮಗ ಇಂಜಿನೀಯರಿಂಗ್ ಮುಗ್ಸಿ ನೌಕ್ರೀನೇ ಮಾಡ್ಲತನ ಅಲ್ಲತೀರಿ. ಇಲ್ಲೀತನ ಯಾ ಪೋರಿಗಿ ಬಿ ಕಣ್ಣೆತ್ತಿ ನೋಡಿಲ್ಲ ಅಂತದುರ ಏಟ್ ಟೆನ್ಶನ್ ಮಾತ್ ಅದಾರಿ ಇದು? ಚಿಂತಿ ಮಾಡಾ ಮಾತ್ ಅದಾ ನೋಡ್ರಿ ಇದು. ಹಂಗೆಂಗ್ ನಿಮ್ಗ ಟೆನ್ಶನ್ ಆಗಿಲ್ಲಂತೆ? ಅಲ್ಲ, ನಿಮ್ ಧೈರ್ಯಕ್ ಮೆಚ್ಚಬೇಕ್ರಿ; ನಾಕ್ ಮಂದ್ಯಾಗ ಅಂಜಲ್ದಪ್ಲೇ ಹೇಳ್ಳತೀರಿ ಇನಾ ಯಾರೀಗಿಬಿ ಲವ್ ಮಾಡಿಲ್ಲಂತ!”

ನಾ ಒಂದ್ ಫಂಕ್ಷನ್ಕ ಹೋಗಿದಾ. ಅಲ್ಲಿ ಎಲ್ಲರೂ ಮಾತಾಡ್ಕೋತ ಕುಂತೀರು. ನಾಭಿ ಹೋಗಿ ಒಂದ್ ಚೇರ್ ಮ್ಯಾಲ ಕುಂತ್. ನನ್ ಬಾಜು ಕುಂತಕಿಕೀಗಿ ಮತ್ತೊಬ್ಬಾಕಿ ಮಾತಾಡ್ಸಕೋತ ಬಂದುಳು.

“ಆರಾಮಿದ್ದೀರೆಕ್ಕಾ? ಯಾವಾಗ ಬಂದ್ರಿ?”

“ಈಗೆ ಬಂದೇವು . ನೋಡ್ದುರೇ ಖೂನಾ ಆಗಲ್ದು ಏಟ್ ಆರಾಮ್ ಇದ್ದೇವಂತ? ನಿಮ್ ಅಣ್ಣ್ ಮಸ್ತ ಇಟ್ಟಾನ್ ನೋಡು. ಮತ್ತೇನ ನಡ್ದದ? ಎಲ್ಲ ಆರಾಮ? ಮಗ ಏನ್ ಮಾಡ್ಲಲತಾನ?”

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಏನಿಲ್ಲೆಕ್ಕ ಆರಾಮ್ ಇದ್ದೇವು. ಮಗಾ ಬಿ ಇಂಜಿನಿಯರಿಂಗ್ ಓದ್ಲತಾನ್. ಕಂಪ್ಯೂಟರ್‌ ಸೈನ್ಸೀಗೆ ಬಕ್ಕೋಳ್ ಕಿಮ್ಮತ್ ಅದಾ ಅಂತಲಾ? ಅದೇ ತೊಗಂಡಾನ…”

“ಹಿಂಗಾ… ಐ ಚಂದೈತ್ ತಗೋ. ನಿನ್ ಮಗ ಚಂದ್ ಹೊಂಟುನ್ ನೋಡು. ಆ ಶಾಂತಿ ಮಗುಂದ್ ಕತಿ ಕೇಳಿದಿಲ್?”

“ಇಲ್ಲೆವ್ವಾ! ಏನಾಗ್ಯಾದ?”

“ಐ… ತೋಲ್ ಲಫ್ಡಾಗೋಳ್ ಅವಾ ಅದುರ್ದು…”

“ಯಾಕಾ ಏನಾಗ್ಯದ? ಮನ್ ನನಗ್ ಸಿಕ್ಕೀಳು ಅಕಿ. ಹೇಳ್ಕೋನೇ ಹೇಳ್ಕೋಲತಿಳು. ನನ್ ಮಗ ಓಟ್ ಛಂದ್ ಈಟ್ ಛಂದ್ ಅಂತ್. ಏನ್ ಲಫ್ಡಾ ಮಾಡ್ಯಾನ?”

“ಅರ್ದೇನ್ ಕೇಳ್ತಿ. ಸುಳ್ ಬಡ್ರುಕಿ ಹೇಳ್ಕೋತದ. ಅದ್ ಕತಿ ಕೇಳ್ದುರ ಹುಚ್ಚ ಹಿಡಿತದ ನಿನಗ. ಯಾವುದೋ ಮಾದರ್ ಪೋರಿಗಿ ಲವ್ ಮಾಡ್ಯಾನಂತ! ಅದ್ಕೆ ಮಾಡ್ಕೋತ ಅಂತ ಕುಂತಾದಂತೇ…”

“ಆಂ! ಇದು ಏನ್ ಹೇಳ್ದೆ ಎಕ್ಕಾ! ಅಕಿಂದ್ ಸೊಕ್ಕ ಮುರಿತ್ ತಕೋ. ಛಲೋ ಮಾಡ್ಯಾನ… ಊರ್ ಮಂದೀಗಿ ಹೆಸರಿಡ್ತೀಳು, ಈಗ ತನ್ ಮನ್ಯಾಗೇ ಆಯ್ತ ನೋಡ್. ಮಂದಿ ಮಾತಾಡ್ದುರಾ ಖಿಂಗೆ ಆಯ್ತದ. ಮಾಡ್ದೋರ್ ಪಾಪ ಆಡ್ದೋರ್ ಬಾಯಾಗಂತ ಹಿರೇರ್ ಅಂಬಾದು ಸುಳ್ಳಿಲ್ಲ ನೋಡೆಕ್ಕ…”

“ಖರೆ ಅಂದಿ ನೋಡು. ಅಕೋ ಇಬ್ಲಿ ಹೊಂಟದ್. ಏಟರಾ ಸೋಂಗ್ ಮಾಡ್ಕೊಂಡು ಹೊಂಟಾಳೇವ್ವ. ಇದರ್ ಮಗಳ್ ಬಿ ಯಾವನಿಗೋ ಲವ್ ಮಾಡ್ಲತದಂತ? ಯಾವ್ ಕುಲ್ದವ್ನೀಗಿ ಮಾಡ್ಯಾದೋ ಏನೋ! ಈಗಿನ ಪರ್ಗೋಳಿಗಿ ಜರಾ ಜರಾ ತಾಳ್ಲ್ಹೋಂಟುದು ನೋಡೇ. ನಾವು ಅವ್ವ-ಅಪ್ಪ ಮದಿ ಮಾಡಾತನ ತಲಿ ಕೆಳಗ್ ಹಾಕ್ಕೊಂಡು ಹೊಯ್ತಿದೇವ್. ಏನೇನ್ ತಿಳಿತಿದಿಲ್ ಮಣ್ಣು…”

“ಹೂಂ ಹೊಯಿಂದೆವ್ವ… ಖರೆ ಎಲ್ಲರೂ ಹಂಗಿರಲೆಕ್ಕ… ನಮ್ ಪಾರಂದ್ ತೊಕೊ . ಇಂಜಿನಿಯರಿಂಗ್ ಮುಗ್ಸಿ ನೌಕ್ರಿನೇ ಮಾಡ್ಲತೂನು ಖರೆ, ಗರ್ತಿ ಮಗ ಯಾರಿಗ್ಬಿ ಕಣ್ಣೆತ್ತಿ ನೋಡಿಲ್ಲ ಎಕ್ಕಾ. ಬಂಗಾರ ತುಕಡಿ ಅಂದುರ್ ಬಿ ಕಮ್ಮ ಅದಾ ನೋಡು. ಓಟು ಮಾನ ಮರ್ಯಾದಿಲಿಂದು ಇರ್ತಾನ. ಖಾಂದಾನ್ ಮ್ಯಾಲ್ ಹೊಯ್ತಾದೆಕ್ಕ. ನಾವ್ಹೆಂಗಾ – ಹಂಗ್ ನಮ್ಮಕ್ಕುಳ್… ಏನಂತಿ?”

“ಖರೆ ಅಂದಿ… ನಮ್ಮಪ್ಲೆ ನಮ್ಮಕ್ಕುಳು ಇರ್ತಾವ್. ನೋಡು ನಮ್ ಪಾರ್ ಬಿ ಯಾರಿಗಿ ಯಾರಿಗಿ ಕಣ್ಣೆತ್ತಿ ನೋಡಲೂನು… ಆಕುಳ್ ಆಕುಳ್ ಇದ್ದಂಗ್…”

ಹಿಂಗ ಇವರಿಬ್ರು ಬಂದೋರ್ದ ಹೋದೋರ್ದೆಲ್ಲ ನಿಂದಾ ಮಾಡ್ಕೋತಾ ಕುಂತೀರು. ಇವರಿಗಿ ಮಾಡ್ಲಾಕ ಬ್ಯಾರೆ ಕೆಲ್ಸ ಇದ್ದಂಗ್ ಕಾಣಾಲ್ದು. ಊರ್ ಮಂದಿ ನಿಂದಾ ಮಾಡ್ಕೋತ ಕುಂತಾರ ಅಂತ ಅನಸ್ತು ನನ್ಗ.

ಓಟುರ್ದಾಗೇ ಇಬ್ಬರು ಗಂಡ್ಸ ಮಕ್ಕುಳ್  ಬಂದುರ್. “ಆರಾಮ್ರಿ?” ಅನ್ಕೋತ ಅವರ್ ಮುಂದ್ ಬಂದ್ ಕುಂತುರು. ಆ ಗಂಡ್ಸುರು ಬಂದ್ ಮ್ಯಾಗರ ಇವರ್ ಬಾಯಿಗಿ ಕೀಲಿ ಬಿಳ್ತದ ಅಂತ ನನಗ್ ಖುಷಿ ಆಯ್ತು.

ಖರೆ… ಆ ಗಂಡಸ್ರು ಇವರ್ಕಿಂತ ಭಾರಿ ಇದ್ದುರು! ಅವರು ಅದು ಇದು ಮಾತಾಡ್ಕೋತಾ, ತಮ್ ದೊಡಸ್ತನ್ಕಿ ಮಾತ್ ಹೇಳ್ಕೊಂಡ್ಹೇಳ್ಕೊಂಡು… ಹೇಳ್ಕೊಂಡ್ಹೇಳ್ಕೊಂಡು ಇನ್ನೊಬ್ರಿಗಿ ಇಳ್ಸಾದು, ಬ್ಯಾರೆಯವ್ರ ಅವ್ಕಾತ್ ತೆಗ್ದು ನಗಾದು ಮಾಡ್ಲತುರು. “ಅಕಿನ್ ಕತಿ ನಮ್ಗ ಗೊತ್ತದ, ಅವನ್ ನಕ್ರಾಗೊಳೆಲ್ಲ ನೋಡಿದೇವ್ ನಾವು, ಅವಾ ಹಂಗಾ, ಇವಾ ಹಿಂಗಾ, ಅಕೋ ಕಕಿ ನೋಡ್ರಿ ಏಟ್ ಶಿನಗಾರ್ ಆಗಿ ಹೊಂಟಾಳ, ಕಿಕಿ ನೋಡೋ ಏಪ್ಪಾ ಅರ್ದಾ ಮುದುಕಿ ಆಗಿ ಏಟ್ ಮುರ್ಕಾ ಮಾಡ್ಲತಾಳ್?  ಚೂಡಿದಾರ ಹಾಕ್ಕೊಂಡಾಳ್ರೋ… ನಮ್ದೇಶಾ ಫಾರೇನ್ ಮಾಡಿಟ್ಟುರಿವ್ರು… ಹ್ಹೀ ಹ್ಹೀ…” ಅಂತ ನಗದಲ್ದೆ…

“…ಇವತುರ್ದು ಒಣ ಧಿಮಾಕೇ ನೋಡಬೇಕ್ರಿ ಮನ್ಯಾಗ್ ಏನ್ ಬಿ ಇಲ್ಲ,” ಅಂತ ಹೆಣ್ಮಕ್ಕುಳುದ್ ಹಿಲ್ಲಾ ಆಡಲ್ದಲ್ದೆ, ಅವರ್ ಮಕ್ಳು ಲವ್ ಮಾಡ್ದುರು, ಇವರ್ ಮಕ್ಕುಳ್ ಲವ್ ಮಾಡ್ದೂರು, ನಮ್ ಪಾರ್ ವೋಟ್ ಚಂದ್ ನಮ್ ಮಗುಳ್ ಈಟ್ ಚಂದಾ, ಅವ್ರು ಕಳ್ಳ ಸೂ… ಮಕ್ಕುಳು ಇವ್ರು…… ಹಿಂಗೆ ಶಂಬೋರ್ ಕತಿ ಹೇಳ್ಕೋತಾ ಮಂದಿ ಮಕ್ಳೀಗಿ ಬೈಯ್ಕೋತಾ, ಹಲ್ಕಿಸ್ಗೋತಾ ಕುಂತುರು.

ಇವ್ರ ಬಾಜು ಕುಂತಾಕಿ ನನಗಾ ಇವರ್ ಮಾತ್ಗೋಳು ಕೇಳಿ-ಕೇಳಿ ತಲಿ ಚಿಟ್ ಹಿಡ್ದ ಹೋಯ್ತು.

ನಾ ನಕ್ಕೋತಾ ಅವರಿಗಂದ… “ಯಾ ಉರಿಂದ್ ಬಂದೀರಿ ಅಕ್ಕೋರೆ? ನಿಮ್ ಪಾರ್ಗೋಳಿಗಿ ದವಾಖಾನಿಗಿ ತೋರ್ಸರಿ. ಇಲ್ಲಾಂದುರ ಮುಂದ ಪ್ರಾಬ್ಲಂ ಅಯ್ತುದ್ ನೋಡ್ರಿ…”

ಅದಕ್ಕವ್ರು, “ಯಾಕ್ರಿ ಹಂಗಲ್ಲತೀರಿ?” ಅಂದುರು.

“ಇಲ್ಲ… ನಿಮ್ ಮಾತ್ ಕೇಳಿ ನನಗ ಹಂಗನಸ್ತರಿ. ನಿಮ್ಮಗ ಇಂಜಿನೀಯರಿಂಗ್ ಮುಗ್ಸಿ ನೌಕ್ರೀನೇ ಮಾಡ್ಲತನ ಅಲ್ಲತೀರಿ. ಇಲ್ಲೀತನ ಯಾ ಪೋರಿಗಿ ಬಿ ಕಣ್ಣೆತ್ತಿ ನೋಡಿಲ್ಲ ಅಂತದುರ ಏಟ್ ಟೆನ್ಶನ್ ಮಾತ್ ಅದಾರಿ ಇದು? ಚಿಂತಿ ಮಾಡಾ ಮಾತ್ ಅದಾ ನೋಡ್ರಿ ಇದು. ಹಂಗೆಂಗ್ ನಿಮ್ಗ ಟೆನ್ಶನ್ ಆಗಿಲ್ಲಂತೆ? ಅಲ್ಲ, ನಿಮ್ ಧೈರ್ಯಕ್ ಮೆಚ್ಚಬೇಕ್ರಿ; ನಾಕ್ ಮಂದ್ಯಾಗ ಅಂಜಲ್ದಪ್ಲೇ ಹೇಳ್ಳತೀರಿ ಇನಾ ಯಾರೀಗಿಬಿ ಲವ್ ಮಾಡಿಲ್ಲಂತ! ಆದೋಟ್ ಜಲ್ದಿ ದವಾಖಾನಿಗಿ ತೋರ್ಸಬೇಕ್ ನೋಡ್ರಿ. ಇಜ್ಜತ್ ಸವಾಲ್ ಅದಾ ಇದು,” ಅಂತಂದ ನಾ.

ಅದಕ್ಕಾಕಿ, “ಅಕ್ಕೋರಾ… ಇದು ಹೆಂಥಾ ಮಾತಾಡ್ಲತೀರಿ?” ಅಂದುಳು.

ನಾ ಅಂದ, “ಅಲ್ರಿ… ಊರ್ ಮಂದಿ ಚಿಂತಿ ಮಾಡ್ಲತೀರಿ, ಖರೇ ನಿಮ್ ಮಕ್ಕುಳ್ ಪ್ರಾಬ್ಲಂ ನಿಮ್ಗ್ ತಿಳ್ದಿಲಲ್ರಿ. ಪಚ್ಚೀಸ್ ಮ್ಯಾಲ್ ಆಗ್ಯಾವ ಹಿನ್ನಾ ಯಾರಿಗ್ ಬಿ ಕಣ್ಣೆತ್ತಿ ನೋಡಿಲ್ಲಂದುರ ಚಿಂತಿ ಮಾಡಾ ಮಾತ್ ಅದಾನಾ ಇಲ್ಲ ನೀವೇ ಹೇಳ್ರಿ?”

“…ಈ ಅಣ್ಣೋರ್ ಮಕ್ಕಳೀಗಿ ಬಿ ಸೇಮ್ ಪ್ರಾಬ್ಲಂ ಅದಾ ನೋಡ್ರಿ. ಒಂದ್ ಪಾರ್ ಆಗ್ಲಿ ಪೋರಿ ಆಗ್ಲಿ, ವಯಸ್ಸೀಗಿ ಬಂದ್ ಮ್ಯಾಲ ಪೋರಿ ಮ್ಯಾಲ್ ಪಾರುಗ ಪಾರನ್ ಮ್ಯಾಲ್ ಪೋರಿಗಿ ಮನ್ಸ ಆಗಲ್ಹೋಯ್ತ ಅಂದುರಾ… ಅವರು ಅವರ್ರೇ, ಹರಾನಾ ಇಲ್ಲಾ ಅಂತ ಅಂಬಾದು ಗ್ಯಾರೆಂಟಿ ಇರಲ್ರಿ. ಒಮ್ ಚೆಕ್ ಮಾಡ್ಸಬೇಕು. ಇದು ಟೆನ್ಶನ್ ಮಾತ್ ಅದಾ ನೋಡ್ರಿ. ಅದ್ಕೆ ಹೇಳ್ಳಾತಿದ, ದವಾಖಾನಿಗಿ ತೋರ್ಸಿ,” ಅಂತಂದ.

ಅವರ್ ಮಾರಿ ಮ್ಯಾಗಿನ ಖಳಿನೇ ಹೊಯ್ತು. ಆ ಗಂಡ್ಸ ಮನಶ್ಯಾ ಅಂದೂನು, “ಅಂದೂರಾ ಲವ್ ಮಾಡಲ್ದ ಮಕ್ಕುಳೆಲ್ಲ ಛಕ್ಕಾ ಇರ್ತಾವ್ ಅಂತಿರೇನು?”

“ಅರೆ ಅಣ್ಣೋರೆ… ಹಂಗ ಚಕ್ಕಾ ಅಂತ ಅನಬ್ಯಾಡ್ದರಿ. ಅವರಿಗಿ ಜಿಜ್ಜತ್ ಕೊಟ್ಟು ಮಂಗಳಮುಖಿ ಅಂತಾರ್ರಿ. ನಿಮಗ್ಯಾರ್ ಹೇಳ್ಯಾರ ಅವ್ರೀಗಿ ಲವ್ ಆಗಲ್ದಂತ? ಅವರೊಳಗ ಬಿ ಒಂದು ಹೆಣ್ಣಿಂದರಾ ಗಂಡಿಂದರಾ ಮನಸ್ ಇರ್ತದ್ರಿ ಅಣ್ಣೌರೆ…”

“…ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್. ಅದು ಒಂದು ಆ್ಯಟ್ರ್ಯಕ್ಸನ್ ಇರ್ತದ್ರಿ. ಅದೇ ಒಂದು ದೊಡ್ಡ ಗಲ್ತಿ ಅಂದಪ್ಲೇ ಮಂದಿ ಮನಿ ಫಂಕ್ಸನ್ದಾಗ ಬಂದು ಕುಂತು ಅವರ್ ಮಕ್ಕುಳ್ ಹಂಗಾ, ಇವರ್ ಮಕ್ಕುಳ್ ಹಿಂಗಾ ಅಂತ ಮಾತಾಡ್ಲತಿರಲಾ? ಜರಾ ತಿಳಿತದ ನಿಮ್ಗ? ನಾಳಿಗಿ ಆಗಾ ಹೋಗಾ ಪರ್ಗೋಳ್ ಬಾರ್ಯಾದಾಗ ಹಿಂಗ್ ಮಾತಾಡ್ದುರ್ ಚಂದ್ ಅನಸ್ತುದ್ ಏನ್ರಿ? ನಿಮ್ ಬೆನ್ ನಿಮ್ಗ ಕಾಣ್ಸಲಾ, ಮಂದಿದ್ಯಾಕ್ ಮಾತಾಡ್ತೀರಿ? ಈ ಅಣ್ಣೋರು ನಮ್ ಕಾಲೇಜ್ದಾಗೆ ಓದ್ಯಾರ್. ನಮ್ ಸೀನಿಯರ್ ಇದ್ದೂರ್ ಇವರ್. ಏನೇನ್ ಮಾಡ್ತೀರು ಅಂತ ನಮ್ಗೆಲ್ಲ ಗೊತ್ತದ. ಹಂಗಂತ ನಾವು ಹೋದಲ್ಲಿ ಬಂದಲ್ಲಿ ಇವರ್ದೇ ಮಾತಾಡ್ದುರ ಚಂದ್ ಇರ್ತುದೇನ್ರಿ? ಮಂದಿ ಮಕ್ಕಳ ಬಾರ್ಯಾದಾಗ ಮಾತಾಡಮುಂದ ಜರಾ ಸೋಚ್ ಹಾಕಿ ಮಾತಾಡಬೇಕ್ರಿ. ಅಲ್ರಿ ಅಣ್ಣೋರೆ… ಚೂಡಿದಾರ ಹಾಕ್ಕೊಂಡು ಮುರ್ಕಾ ಮಾಡ್ತಾಳ, ನಮ್ದೇಶ ಫಾರೆನ್ ಮಾಡ್ತಾಳ ಅಂತ್ ಅಂದ್ರೆಲ್ಲ, ಮತ್ ನೀವ್ಯಾಕ್ ಪ್ಯಾಂಟ್-ಶರ್ಟ ಹಾಕ್ಕೊಂಡಿರಿ? ಧೋತುರ್ ಹಾಕ್ಕೊಂಡು ಬರಾದಿತ್ತ್ರೀ ಮತ್…” ಅಂತಂದ ನಾ ಸಿಟ್ಟೀಲಿ.

ಅದಕ್ ಅಕಿ, “ಐ… ನೀವೇನ್ ಯಾರ್ ಮಾತ್ ಆಡಲೇನು? ಆಚಾರ್ ಹರಿಬ್ಯಾಡ್ರಿ. ಎಲ್ಲರೂ ಮಾತಾಡ್ತಾರ್…” ಅಂತಂದು ಮೊಸಡಿ ಉಬ್ಬಸಿ ಕುಂತುಳ್.

ನಾ ಬಾಯಿ ತೆರ್ದು ಇನಾ ಏನೋ ಅಲ್ಲತಿದ ಇವ್ರು, “ಏಯ್ ಪಾರು ಬಾ ಇಲ್ಲಿ…” ಅಂತ್ ಕರ್ದುರು.

“ಇನ್ನೊಮ್ಮ ಮಂದಿ ಮಾತ ಆಡಬ್ಯಾಡ್ರಿ… ನಿಮ್ದು ನೀವು ದೊಡ್ಡಸ್ತನ್ಕಿ ಏಟ್ ಬೇಕಾದೋಟ್ ಹೇಳ್ಕೋರಿ. ಖರೆ ಇನ್ನೊಬ್ಬುರ್ ನಿಂದಾ ಆಡಬ್ಯಾಡ್ರಿ ನೋಡ್ರಿ,”  ಅಂತಂದು ನಾ ಎದ್ದು ಹೋದ.

ದುನಿಯಾದಾಗ ಎಂತೆಂಥಾ ಮಂದಿ ಇರ್ತಾವ್! ತಮ್ ದೊಡ್ಡಸ್ತನ್ಕಿ ಹೇಳ್ಕೋಮಾ ಚಕ್ಕರ್ದಾಗ ಮಂದಿ ಮಕ್ಕಳೀಗಿ ಹೆಸ್ರಿಡ್ತಾರ್ ಅಂತನಸಿ ಸಿಟ್ಂದುರ್ ಸಿಟ್ ಬಂತು ನನಗ. ಖರೆ ಏನ್ಮಾಡ್ಲಿ? ಏನ್ ಮಾಡ್ಲಾಕ್ ಬರಲ್ದು…

ಈಸ್ ದಿನ ಒಣ ಹೆಣ್ಮಕ್ಕೂಳೆ ನಿಂದಾ ಆಡ್ತಾರಂತ ತಿಳ್ಕೊಂಡಿದಾ ನಾ. ಇಗೋತ್ ಗೊತ್ತಾಯ್ತು ಗಂಣ್ಸೂರ್ ಬಿ ಕುಂತ್ ಹೆಂಗ್ಸರಪ್ಲೇ ನಿಂದಾ ಆಡ್ತಾರ್. ಹೆಂಗ್ಸರಪ್ಲೇ ಅಂಬಾದೇನ್ ಅದಾ ನಾವ್ ತಿಳ್ಕೊಂಡಿದೇವ್ ಹೆಂಗ್ಸರೇ ನಿಂದಾ ಆಡ್ತಾರ್ ಅಂತೇಳಿ… ಗಂಡ್ಸುರ್ ಬಿ ನಿಂದಾ ಖೋರೇ ಇರ್ತಾರ್. ಊರ್ ಮಂದಿ ಮಾತಾಡಿ ಹಲ್ ಖಿಸಿತಾರ್ ಅಂತ ಅನ್ಸಿ ನನಗರ ಹೇಸ್ಕಿ ಬಂದಂಗೇ ಆಯ್ತು. ನಾ ಅಲ್ಲಿಂದು ಎದ್ದು ಹೋದ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಬಿ ಜೆ ಪಾರ್ವತಿ ವಿ ಸೋನಾರೆ
ಬಿ ಜೆ ಪಾರ್ವತಿ ವಿ ಸೋನಾರೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ ಎಂಬ ಕುಗ್ರಾಮದವರು. ಓದಿದ್ದು, ಬೆಳೆದದ್ದೆಲ್ಲ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ. ಅನೇಕ ನಾಟಕ, ಕಿರುಚಿತ್ರಗಳಲ್ಲಿ ಅಭಿನಯ. ಸಾಹಿತ್ಯ ಕೃತಿಗಳ ರಚನೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...