ಬಸ್ ಚಾಲನೆ ವೇಳೆ ದಿಢೀರ್ ಹೃದಯಾಘಾತವಾಗಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ದಾಸನಪುರ ಮಾರ್ಗಮಧ್ಯೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಹಾಸನ ಮೂಲದ ಕಿರಣ್ ಕುಮಾರ್(40) ಮೃತ ಚಾಲಕ.
ಚಾಲಕ ಕಿರಣ್ ಕುಮಾರ್ ಬುಧವಾರ ಬೆಳಗ್ಗೆ ನೆಲಮಂಗಲ – ದಾಸನಪುರ ಮಾರ್ಗವಾಗಿ ಬಿಎಂಟಿಸಿ ಬಸ್( ನಂಬರ್ ಕೆ. ಎ 57 – F4007 ) ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ದಿಢೀರ್ ಕುಸಿದು ಬಿದ್ದಿದ್ದಾರೆ.
ಕೂಡಲೇ ಎಚ್ಚೆತ್ತ ಬಸ್ ನಿರ್ವಾಹಕ ಓಬಳೇಶ್ ಚಲಿಸುತ್ತಿದ್ದ ಬಸ್ಸನ್ನು ನಿಯಂತ್ರಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಕುಸಿದುಬಿದ್ದ ಚಾಲಕ ಕಿರಣ್ ಕುಮಾರ್ ಅವರನ್ನು ಪ್ರಯಾಣಿಕರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದು, ಕಿರಣ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ರಾಯಚೂರು | ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಂದ ಉಚಿತ ಹೆಲ್ಮೆಟ್ ವಿತರಣೆ
ಚಾಲಕ ಕಿರಣ್ ಕುಮಾರ್ ಕುಸಿದು ಬಿದ್ದಿರುವ ಸಂಪೂರ್ಣ ದೃಶ್ಯ ಬಸ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.