- ರಾಜ್ಯ ಸರ್ಕಾರ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ್, ವಿದ್ಯಾನಿಧಿ ಯೋಜನೆಗಳು ವಾಪಸ್ ಪಡೆದಿದೆ.
- ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಬಿಜೆಪಿ ರೈತ ಮೋರ್ಚಾ ನೇತ್ರತ್ವದಲ್ಲಿ ನಡೆದ ಪ್ರತಿಭಟನೆ
ಹುಮನಾಬಾದ್ ಮತಕ್ಷೇತ್ರದ ಹುಮನಾಬಾದ್ ಮತ್ತು ಚಿಟುಗುಪ್ಪಾ ತಾಲೂಕುಗಳಲ್ಲಿ ಅತಿ ಕಡಿಮೆ ಮಳೆಯಾದರೂ ಕೂಡಾ ಬರಗಾಲ ಪೋಷಿಸದೇ ಮಲತಾಯಿ ಧೋರಣೆ ಮಾಡಿದೆ ಎಂದು ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಬಿಜೆಪಿ ರೈತ ಮೋರ್ಚಾ ಒಗ್ಗೂಡಿ ಹುಮನಾಬಾದ್ ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧ ದವರೆಗೆ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆಯ ನೇತ್ರತ್ವ ವಹಿಸಿ ಮಾತನಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ್, ವಿದ್ಯಾನಿಧಿ ಯೋಜನೆಗಳು ಕಾಂಗ್ರೇಸ್ ಸರ್ಕಾರ ವಾಪಸ್ ಪಡೆದಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಸಾಧ್ಯವಾಗದೆ ಗಗಕ್ಕೇರಿದೆ. ಕೃಷಿಗೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗಿದೆ, ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿದೆ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಸರ್ಕಾರ ರೈತರ ಬಗ್ಗೆ ಕಾಳಜಿವಹಿಸದೇ ನಿರ್ಲಕ್ಷ್ಯ ವಹಿಸುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬೀದರ್ ಜಿಲ್ಲೆಯ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ ರಾಜ್ಯ ಸರ್ಕಾರ ಈ ಎರಡು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸದೆ ಅನ್ಯಾಯ ಎಸಗಿದೆ. ಕೂಡಲೇ ಎರಡು ತಾಲ್ಲೂಕು ಬರಪೀಡಿತ ತಾಲ್ಲೂಕು ಎಂದು ಘೋಷಿಸಬಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂಬಂಧ ರಾಜ್ಯಪಾಲರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮದ್ಯ ಮಾರಾಟಕ್ಕೆ ಪರವಾನಗಿ | ಜೀವ್ನ ಬರ್ಬಾದ್ ಆಗ್ತದೆ ಎನ್ನುತ್ತಿರುವ ಮಹಿಳೆಯರು
ಪ್ರತಿಭಟನೆಯಲ್ಲಿ ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ ಕಲ್ಲೂರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಸೀಂ ಅಲಿ, ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪ ಮಲ್ಲಶೆಟ್ಟಿ, ತಾಲ್ಲೂಕು ಅಧ್ಯಕ್ಷ ಮುಖಿಮೋದ್ದೀನ್ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ರೈತ ಮೋರ್ಚಾ ಅಧ್ಯಕ್ಷ ರಾಮರಾವ ಕೇರೂರ್ ಸೇರಿದಂತೆ ಗಣಪತರಾವ ಸೇಡೋಳ, ಉಷಾರೆಡ್ಡಿ, ಜಗದೇವಿ ಬಲಭೀಮ, ಅನೀಲ ಪಸರ್ಗಿ, ವಿಶ್ವನಾಥ ಪಾಟೀಲ್ ಹಾಗೂ ಇತರರಿದ್ದರು.