ತುಂಗಭದ್ರಾ ನದಿ ಬತ್ತಿ ಹೋಗಿದೆ. ಅಲ್ಲಲ್ಲಿ ನೀರು ನಿಂತಿದ್ದು, ನಿಂತ ನೀರಿನಲ್ಲಿ ಮೀನುಗಾರಿಗೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಮೀನಿನ ಲಭ್ಯತೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯಲ್ಲಿ ತಾಜಾ ಮೀನಿನ ಬೆಲೆಯೂ ಕುಸಿದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯದ ಒಳಹರಿವು ಗಣನೀಯವಾಗಿ ಕುಸಿದಿದೆ. 10 ವರ್ಷಗಳಲ್ಲಿ ಸರಾಸರಿ ಪ್ರಕಾರ ಈ ವರ್ಷ ಒಳಹರಿವು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರತಿ ವರ್ಷ ಸರಾಸರಿ 3,608 ಕ್ಯೂಸೆಕ್ ಇರುತ್ತಿದ್ದ ಒಳಹರಿವು, ಈ ವರ್ಷದ ಜೂನ್‌ನಲ್ಲಿ 1,325 ಕ್ಯೂಸೆಕ್‌ಗೆ ಕುಸಿದಿದೆ. ಹರಿಯುವ ನೀರಿಲ್ಲದ ಕಾರಣ ಮೀನುಗಳೆಲ್ಲ ನದಿಯ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರಿನಲ್ಲಿ ಬೀಡುಬಿಟ್ಟಿವೆ. ಅವುಗಳು ಮೀನುಗಾರರ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಿವೆ.
ತುಂಗಭದ್ರಾ ನದಿಯಲ್ಲಿ ಪ್ರತಿ ಮೀನುಗಾರ ಕುಟುಂಬ ಮಳೆಗಾಲ ಮತ್ತು ಚಳಿಗಾಲದಲ್ಲಿ ದಿನಕ್ಕೆ ಸರಾಸರಿ 20 ರಿಂದ 30 ಕೆ.ಜಿ ಮೀನು ಹಿಡಿಯುತ್ತದೆ. ಮಾರುಕಟ್ಟೆಯಲ್ಲಿ ಉತ್ತಮವಾದ ಮೀನಿನ ಬೆಲೆ ಕೆ.ಜಿಗೆ 100 ರಿಂದ 150 ರೂ. ಇರುತ್ತದೆ. ಆದರೆ, ಬೇಸಿಗೆಯ ದಿನಗಳು ಮುಂದುವರಿದರೆ ನದಿ ಬತ್ತಿಹೋಗುತ್ತದೆ. ಅಲ್ಲದೆ, ಮೀನುಗಾರಿಕೆ ಹಗಲು ರಾತ್ರಿ ನಡೆಯುತ್ತದೆ. ಈ ವರ್ಷ ನದಿ ತೀರದಲ್ಲಿ ಇನ್ನೂ ಮಳೆಯಾಗದ ಕಾರಣ, ನದಿ ಬತ್ತಿಹೋಗುತ್ತಿದೆ. ನಿಂತ ನೀರಿನಲ್ಲಿ ಮೀನುಗಾರರ ಪ್ರತಿ ಕುಟುಂಬವು ದಿನಕ್ಕೆ 30 ರಿಂದ 45 ಕೆ.ಜಿ ಮೀನು ಹಿಡಿಯುತ್ತಿದೆ. ಹೇರಳವಾಗಿ ಮೀನು ಸಿಗುವುದರಿಂದ ಬೆಲೆ ಕುಸಿದು ಕೆ.ಜಿಗೆ ಕೇವಲ 80 ರೂ.ಗೆ ಸಿಗುತ್ತಿದೆ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸಣ್ಣ ನೀರಾವರಿ ಇಲಾಖೆಯಲ್ಲಿ ಅಕ್ರಮದ ಆರೋಪ; ವರದಿ ಕೇಳಿದ ಸಚಿವ ಬೋಸರಾಜು
“ಥರ್ಮಾಕೋಲ್ ಐಸ್ ಬಾಕ್ಸ್ ನಂತಹ ಮೂಲ ಸೌಕರ್ಯಗಳನ್ನು ಬಹುತೇಕ ಮೀನುಗಾರರ ಕುಟುಂಬಗಳು ಹೊಂದಿಲ್ಲ. ಅವರ ಬಳಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಹಿಡಿದ ಮೀನುಗಳನ್ನು ಕಡಿಮೆ ಬೆಲೆಗೆ ಮೀನು ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಮೀನುಗಾರ ಹನುಮಂತಪ್ಪ ಹೇಳಿದ್ದಾರೆ.
“ಕೆಲವು ಮೀನುಗಾರರು ಮೀನುಗಳನ್ನು ಬಳ್ಳಾರಿ, ಹೊಸಪೇಟೆ, ಗಂಗಾವತಿ, ತೋರಣಗಲ್, ಕೊಪ್ಪಳದ ವ್ಯಾಪಾರಿಗಳಿಗೆ ಕೆ.ಜಿಗೆ 110 ರಿಂದ 120 ರೂ.ಗೆ ಸಗಟು ದರದಲ್ಲಿ ಮಾರಾಟ ಮಾಡುತ್ತಾರೆ. ಆದರೆ, ಎಲ್ಲ ಮೀನುಗಾರರಿಗೂ ಇದು ಸಾಧ್ಯವಾಗಿಲ್ಲ. ಮೀನುಗಾರರಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಲ್ಪಿಸುವಂತೆ ಮೀನುಗಾರಿಕೆ ಇಲಾಖೆಗೆ ಮನವಿ ಮಾಡಿದ್ದೇವೆ. ಆದರೆ, ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ” ಎಂದು ಕಂಪ್ಲಿ ಮೀನುಗಾರರ ಸಂಘದ ಅಧ್ಯಕ್ಷ ಎಸ್.ಆರ್ ಚಿನ್ನರಾಜು ಹೇಳಿದ್ದಾರೆ.