ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಗಡಿಪಾರು ಮಾಡಿ, ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಜನರು ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಬಳಿಕ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಪ್ರತಿಭಟನೆ ನೇತ್ರತ್ವದ ವಹಿಸಿದ ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ, ʼರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಅಂಬೇಡ್ಕರ್ ಕುರಿತ ಆಡಿದ ಅವಮಾನಕಾರಿ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಮತ್ತು ಸಂಪುಟದಿಂದ ಅಮಿತ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
“ಅಂಬೇಡ್ಕರ್ ರಚಿತ ಸಂವಿಧಾನದಿಂದಲೇ ಗೃಹ ಸಚಿವರಾದ ಅಮಿತ್ ಶಾ ತಮ್ಮ ಭಾಷಣದಲ್ಲಿ ʼಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಎನ್ನುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ, ಏಳೇಳು ಜನ್ಮಗಳಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎಂದು ಮಾತನಾಡಿರುವುದು ಖಂಡನೀಯವಾಗಿದೆʼ ಎಂದು ಕಿಡಿಕಾರಿದರು.
ʼಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಡಾ.ಅಂಬೇಡ್ಕರ್‌ರವರ ವಿಚಾರಗಳ ಮೇಲೆ ಹಾಗೂ ಸಂವಿಧಾನದ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಸಂವಿಧಾನ ಬದಲಿಸಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಹೇಳಿರುವುದು, ಜಂತರ್ ಮಂಥರ್‌ನಲ್ಲಿ ಸಂವಿಧಾನ ಪ್ರತಿ ಸುಟ್ಟಿರುವುದು, ಇತ್ತೀಚೆಗೆ ಉಡುಪಿಯ ಪೇಜಾವರ ಶ್ರೀ ಅವರ ಸಂವಿಧಾನ ವಿರೋಧಿ ಹೇಳಿಕೆ ಸೇರಿದಂತೆ ಸಂವಿಧಾನ ವಿರುದ್ಧದ ನಡೆಗಳು ಆರ್‌ಎಸ್‌ಎಸ್, ಬಿಜೆಪಿ ಎಂದಿಗೂ ಸಂವಿಧಾನ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ದೇಶದಲ್ಲಿ ಮನುಸ್ಮೃತಿ ಜಾರಿಗೆ ತರುವ ಹುನ್ನಾರದಿಂದ ಇಂತಹ ಹೇಳಿಕೆಗಳು ಕೊಡುವುದು ಅವರಿಗೆ ರೂಢಿಯಾಗಿದೆʼ ಎಂದರು.
ಬಾಬಾ ಸಾಹೇಬರನ್ನು ಅವಮಾನ ಮಾಡಿದ ಸಚಿವ ಅಮೀತ್ ಶಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ತಮ್ಮ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್ ಕುರಿತ ಹೇಳಿಕೆ : ಗೃಹ ಸಚಿವ ಅಮಿತ್ ಶಾ ವಜಾಕ್ಕೆ ಬಿಎಸ್‌ಪಿ ಆಗ್ರಹ
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಮಲ್ಲಿಕಾರ್ಜುನ ಕ್ರಾಂತಿ, ಇನಾಯತ್ ಉರ್ ರೆಹಮಾನ, ಸ್ಯಾಮಸನ್ ಮಾಳಿಕೇರ, ಡಾ.ಭೀಮಣ್ಣ ಮೇಟಿ, ನಾಗಣ್ಣ ಬಡಿಗೇರ, ಮಾನಪ್ಪ ಕಟ್ಟಿಮನಿ, ಪ್ರಭು ಬುಕ್ಕಲ್, ಕಾಶಿನಾಥ ನಾಟೇಕಾರ್, ಮಹದ್ ಸಲೀಮ್, ಡಾ.ಭಗವಂತ ಅನವಾರ, ಮರೆಪ್ಪ ಪ್ಯಾಟಿ, ನೀಲಕಂಠ ಬಡಿಗೇರ, ಮಲ್ಲಣ್ಣ ದಾಸನಕೇರಿ, ನಿಂಗಪ್ಪ ಕೋಲೂರು, ಫಕೀರ್ ಅಹ್ಮದ್,
ಮರೆಪ್ಪ ಜಾಲಿಮಂಚಿ, ಮಲ್ಲಿಕಾರ್ಜುನ ವಾಗಣಗೇರಾ, ಮರಲಿಂಗಪ್ಪ ಕುರಕುಂಬಳ, ನಿಂಗಪ್ಪ ಬೀರನಾಳ, ಗೌರಮ ಕ್ರಾಂತಿ, ಐಕೂರ್, ಮಲ್ಲಿಕಾರ್ಜುನ ಕುಮನೂರ್, ಭೀಮಣ್ಣ ಗೌಂಡಿ, ಗಾಲಬ್ ಪಟೇಲ್, ವಸಂತ್ ಸುಂಗಲಕರ್,ಬಸವರಾಜ ಗುಡಿಮನಿ, ರಾಮಣ್ಣ ಕಲ್ಲದೇವನಳ್ಳಿ, ಸದಾಮ್ ಹುಸೇನ್, ಶೇಖರ್ ಬಡಿಗೇರ್,ರಾಯಪ್ಪ, ಸಿದ್ದು ಮುಂಡಾಸ್, ಸಂತೋಷ, ಗಿರೀಶ್ ಚಟ್ಟೇರಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.