ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಇಒಡಿಬಿ-ಒಬಿಪಿಎಸ್ (EoDB-OBPS) ತಂತ್ರಾಂಶದ ಮೂಲಕ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್ ನಲ್ಲಿ ನೀಡಲಾಗುತ್ತಿದ್ದು, ಪಾಲಿಕೆಯ ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿದೆ. ಇಂತಹ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ. ಹಾಗಾಗಿ, ಕಟ್ಟಡ ನಕ್ಷೆ ಮಂಜೂರಾತಿ ನೀಡಲು 2025ರ ಜುಲೈ 1ರಿಂದ ಇ-ಖಾತಾ ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, “ಪಾಲಿಕೆಯ ನಗರ ಯೋಜನಾ ವಿಭಾಗದಿಂದ ನಕ್ಷೆ ಮಂಜೂರಾತಿ ನೀಡುತ್ತಿರುವ ಇಒಡಿಬಿ-ಒಬಿಪಿಎಸ್ ಆನ್ ಲೈನ್ ತಂತ್ರಾಂಶವನ್ನು ಪಾಲಿಕೆಯ ಕಂದಾಯ ವಿಭಾಗದಿಂದ ಇ-ಖಾತಾ ನೀಡುತ್ತಿರುವ ಇ-ಆಸ್ತಿ ತಂತ್ರಾಂಶದೊಂದಿಗೆ ಏಕೀಕರಣಗೊಳಿಸಲು ಕ್ರಮ ಜರುಗಿಸಲಾಗಿದೆ. ನಿವೇಶನ /ಸ್ವತ್ತಿನ ಕಂದಾಯ ದಾಖಲಾತಿಗಳ ಪರಿಶೀಲನಾ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಕೈಗೊಳ್ಳಲು ಮುಂದಿನ ಜುಲೈ 1ರಿಂದ ರಿಂದ ಸ್ವತ್ತಿನ ಇ-ಖಾತಾ/ಇಪಿಐಡಿ ಸಂಖ್ಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ-ಖಾತಾ ಸಲ್ಲಿಸುವುದು ಅವಶ್ಯವಿರುತ್ತದೆ. ಇದರಿಂದಾಗಿ ಪಾಲಿಕೆಯ ಕಂದಾಯ ವಿಭಾಗಕ್ಕೆ ಸ್ವತ್ತಿನ ದಾಖಲಾತಿಗಳ ಪರಿಶೀಲನೆಗಾಗಿ ಸಲ್ಲಿಸುವ ಕ್ರಮವನ್ನು ಹೊರತುಪಡಿಸಿರುವುದರಿಂದ ಪಾಲಿಕೆಯು ನೀಡುವ ಸೇವೆಗಳನ್ನು ಸರಳೀಕರಣಗೊಳಿಸಲು ಹಾಗೂ ಕಾಲಮಿತಿಯಲ್ಲಿ ನಕ್ಷೆ ಮಂಜೂರಾತಿ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಜುಲೈ 1ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಸದರಿ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಲ್ತುಳಿತ | ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಬೇಕು: ನಟ ಕಿಶೋರ್ ಆಗ್ರಹ
ಮುಂದುವರೆದು, ನಂಬಿಕೆಯೊಂದಿಗೆ ಪರಿಶೀಲಿಸುವ (Trust & Verify) ವಿಧಾನದಡಿ ಸೃಜನೆಗೊಳ್ಳುವ ತಾತ್ಕಾಲಿಕ ನಕ್ಷೆ ಮಂಜೂರಾತಿಗಳನ್ನು ಸಂಬಂಧಪಟ್ಟ ಸಹಾಯಕ ನಿರ್ದೇಶಕರು (ನಗರ ಯೋಜನೆ) ಇವರು ಕಾಲಮಿತಿಯೊಳಗೆ ದೃಢೀಕರಿಸುವುದು ಅಥವಾ ಸಕಾರಣಗಳೊಂದಿಗೆ ನಿರಾಕರಿಸದೆ ಇದ್ದಲ್ಲಿ, ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸ್ವಯಂ ಅನುಮೋದನೆ ನೀಡುವುದು. ಇಂತಹ ಸ್ವಯಂ ಅನುಮೋದನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟ ವಲಯ ಕಚೇರಿಗಳ ಜಂಟಿ ನಿರ್ದೇಶಕರು (ನಗರ ಯೋಜನೆ) ವಲಯ ಆಯುಕ್ತರಿಗೆ ವರದಿ ಸಲ್ಲಿಸಲು ಆದೇಶಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.