ಸತೀಶ್ ಸೈಲ್ ಮನೆ ಮೇಲೆ ಇಡಿ ದಾಳಿ | ಪ್ರಕರಣದ ಸುತ್ತ ಒಂದು ರಾಜಕೀಯ ಒಳನೋಟ

Date:

Advertisements

ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲೂ ಗಮನ ಸೆಳೆಯುತ್ತಿವೆ. ಶಾಸಕ ಸತೀಶ್ ಸೈಲ್ ವಿರುದ್ಧ ನಡೆಯುತ್ತಿರುವ ತನಿಖಾ ಕ್ರಮಗಳು ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ. ಇತ್ತೀಚೆಗೆ ಅವರ ಮನೆ ಮೇಲೆ ಆದ ಇಡಿ ದಾಳಿ ಸುದ್ದಿಯು ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯ ಮಟ್ಟದಲ್ಲಿಯೂ ಸಂಚಲನಕ್ಕೆ ಕಾರಣವಾಗಿದೆ. ಆದರೆ ಈ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಎರಡು ಮುಖ್ಯ ದಿಕ್ಕುಗಳಲ್ಲಿ ಗಮನಹರಿಸಬೇಕು. ಕಾನೂನು ಪ್ರಕ್ರಿಯೆಯ ಸತ್ಯತೆ ಮತ್ತು ರಾಜಕೀಯದ ಪ್ರಭಾವ.

ʼಕೈʼ ಶಾಸಕ ಸತೀಶ್ ಸೈಲ್ ಈ ಹಿಂದೆ ಬಿಜೆಪಿಗೆ ಸೇರುವ ಎಲ್ಲಾ ಪ್ರಯತ್ನವನ್ನು ನಡೆಸಿದ್ದರು. ಅದು ಸಾಧ್ಯವಾಗದೇ ಇದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿ 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 2018ರಲ್ಲಿ ಬದಲಾದ ಜಿಲ್ಲೆಯ ರಾಜಕಾರಣದಲ್ಲಿ ಸೋತು ಮತ್ತೆ 2023ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ 2023ರ ಚುನಾವಣೆಯಲ್ಲಿ ಜಯ ಸಾಧಿಸಿದರು. ನಂತರ ಕರ್ನಾಟಕ ಮಾರ್ಕೆಟಿಂಗ್ ಕಮ್ಯುನಿಕೇಶನ್ ಅಂಡ್ ಅಡ್ವಟೈಸಿಂಗ್ ಲಿಮಿಟೆಡ್‌ನಲ್ಲಿ ಅಧ್ಯಕ್ಷ ಸ್ಥಾನ ಪಡೆದರು. ರಾಜಕೀಯದಲ್ಲಿ ತಮ್ಮ ಸ್ಥಾನ ತಹಬದಿಗೆ ಬಂದು, ನೆಮ್ಮದಿಯ ಆಡಳಿತ ನಡೆಸಬೇಕು ಅನ್ನುವಷ್ಟರಲ್ಲಿ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದರು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದ ಶಾಸಕರಿಗೆ ಮೊನ್ನೆ ನಡೆದ ಇಡಿ ದಾಳಿ ಅವರ ರಾಜಕೀಯ ಭವಿಷ್ಯವನ್ನು ಮತ್ತೆ ಅಲುಗಾಡಿಸಿ ಅವರ ಜತೆಗೆ ಅವರ ಬೆಂಬಲಿಗರನ್ನೂ ಚಿಂತೆಗೀಡುಮಾಡಿದೆ.

ಸೈಲ್ ಅವರ ವಿರುದ್ಧದ ಪ್ರಕರಣಗಳು, ತನಿಖೆಗಳು ಹೊಸದೇನೂ ಅಲ್ಲ. ವರ್ಷಗಳ ಹಿಂದೆ ಬೇಲೆಕೇರಿ ಅದಿರು ನಾಪತ್ತೆ ಮತ್ತು ಅಕ್ರಮ ಸಾಗಾಟದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದು ಕೋಟ್ಯಂತರ ರೂ. ಅಕ್ರಮ ವ್ಯವಹಾರ ಪ್ರಕರಣವಾಗಿರುವುದರಿಂದ ಕಾನೂನು ಪ್ರಕ್ರಿಯೆಯು ಕೂಡ ಅಷ್ಟೇ ಗಂಭೀರತೆಯಿಂದ ಕೂಡಿತ್ತು. ಆ ಪ್ರಕರಣದಲ್ಲಿ ಅವರಿಗೆ ಈಗಾಗಲೇ ವಿಶೇಷ ನ್ಯಾಯಾಲಯದಲ್ಲಿ ಕಾನೂನು ಸವಾಲು ಎದುರಾಗಿದ್ದು, ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

Advertisements
WhatsApp Image 2025 08 25 at 11.31.03 AM

ಮೊನ್ನೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ ದಾಳಿಯಾ?

ಆಡಳಿತ ಪಕ್ಷಗಳು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷ ನಾಯಕರ ಮೇಲೆ ಒತ್ತಡ ತರುತ್ತವೆ ಎಂಬ ಆರೋಪ ಸಾಮಾನ್ಯ. ಅದೇ ರೀತಿಯ ಕೆಲ ವಿಶ್ಲೇಷಣೆಗಳು, ಆರೋಪಗಳು ಸೈಲ್‌ ಅವರ ಪ್ರಕರಣದಲ್ಲಿ, ಅದರಲ್ಲೂ ಅವರು ಕಾಂಗ್ರೆಸ್‌ ಮುಖಂಡರಾಗಿರುವುದರಿಂದ ಹೆಚ್ಚಾಗಿ ಕೇಳಿಬರುತ್ತಿವೆ. 2023ರ ಚುನಾವಣೆಯಲ್ಲಿ ಹಿಂದುತ್ವದ ಗಟ್ಟಿ ನೆಲೆಯಾಗಿರುವ ಕಾರವಾರ, ಅಂಕೋಲಾ ಮತಕ್ಷೇತ್ರದಲ್ಲಿ ಹಾಗೂ ಮೋದಿ ಅಲೆ ಎದುರಿಸಿ ಸೈಲ್‌ ಗೆದ್ದರು. ಹೀಗಾಗಿ, ಅವರ ವಿರುದ್ಧ ನಡೆಯುತ್ತಿರುವ ಈ ಕ್ರಮವನ್ನು ರಾಜಕೀಯ ಪ್ರೇರಿತ ದಾಳಿ ಎಂದು ಕೆಲವು ಆಪ್ತ ವಲಯಗಳು ಹೇಳುತ್ತಿವೆ.

ಆದರೆ, ಮತ್ತೊಂದೆಡೆ ಅವರ ಮೇಲೆ “ಅಕ್ರಮ ಅದಿರು ಸಾಗಾಟದ ಆರೋಪಗಳಿವೆ ಮತ್ತು ಅವರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದು‌ ರಾಜಕೀಯ ಪ್ರೇರಿತ ದಾಳಿ ಅಲ್ಲ. ಅವರ ಮೇಲೆ ಕಾನೂನು ಬದ್ಧವಾಗಿಯೇ ದಾಳಿ ಆಗಿದೆ. ಆದ್ದರಿಂದ ಅವರು ತನಿಖೆ ಎದುರಿಸಲೇಬೇಕು” ಎಂಬ ಅಭಿಪ್ರಾಯವೂ ಮತ್ತೊಂದು ವಲಯದ  ಮಾತಾಗಿದೆ. ಹೀಗಾಗಿ, ರಾಜಕೀಯ ಅನುಮಾನಗಳು ಏನೇ ಇದ್ದರೂ ತನಿಖೆಯ ಅಗತ್ಯ ಮತ್ತು ಪ್ರಕರಣದ ಸ್ವರೂಪ ಹೊರಗೆ ಬರುವ ತನಕ ಒಂದು ನಿಲುವಿಗೆ ಬರಲು ಸಾಧ್ಯವಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ವಾದ.

ಸತೀಶ್ ಸೈಲ್ ಅವರು ಈಗಾಗಲೇ ಪ್ರಕರಣವೊಂದರಡಿ ಜಾಮೀನಿನ ಮೇಲೆ ಹೊರಗೆ ಇರುವುದರಿಂದ ಅವರು ಯಾವ ಕ್ಷಣದಲ್ಲಾದರೂ ಬಂಧನವಾಗಬಹುದು ಎಂಬ ಆತಂಕ ಅವರ ಆಪ್ತ ವಲಯದಲ್ಲಿ ಇದೆ. ಅಕ್ರಮ ಅದಿರು ಸಾಗಾಟ ಪ್ರಕರಣ ಕೂಡ ಅವರನ್ನು ಬಿಟ್ಟೂಬಿಡದೆ ಕಾಡತೋಡಗಿದೆ. ಹಾಗಾಗಿ ಈ ಮಧ್ಯದಲ್ಲಿ ಸೈಲ್ ಅವರ ಬಂಧನವಾಗಿ ಅಧಿಕಾರ ಕಳೆದುಕೊಂಡರೆ ಏನು ಮಾಡುವುದು ಎಂಬ ಆತಂಕ ಸಾಮಾನ್ಯವಾಗಿಯೇ ಅವರ ಬೆಂಬಲಿಗರಲ್ಲಿ ಮನೆ ಮಾಡಿದೆ. ತಕ್ಷಣ ಚುನಾವಣೆ ನಡೆದರೆ ಶಾಸಕ ಕಿರೀಟವನ್ನು ಕಟ್ಟಿಕೊಳ್ಳುವ ತವಕ ಮತ್ತೊಂದು ವರ್ಗದಲ್ಲಿ ಮೂಡಿದೆ. ಇಂಥ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

WhatsApp Image 2025 08 25 at 11.34.47 AM

ಇತ್ತೀಚಿನ ದಶಕಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಾಸಕರು ಪದೇಪದೇ ವಿಚಾರಣೆಗೆ ಒಳಪಟ್ಟಿದ್ದು ಬಿಟ್ಟರೆ, ಮನೆ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡಿದ ಉದಾಹರಣೆಗಳು ಇಲ್ಲ. ಸೈಲ್ ಅವರ ಮೇಲೆ ಅಕ್ರಮ ಅದಿರು ನಾಪತ್ತೆ ಪ್ರಕರಣ ಸಂಬಂಧಿಸಿದಂತೆ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ವಿಶೇಷ ಜನಪ್ರತಿನಿಧಿ ನ್ಯಾಯಾಲಯವು ಕೂಡ ಅವರನ್ನು ತಪ್ಪಿತಸ್ಥ ಎಂದು ತೀರ್ಪನ್ನು ಕೊಟ್ಟಿದೆ. ಸದ್ಯ‌ ಅವರು ಶಾಸಕರಾಗಿದ್ದರೂ ಕೂಡ ವಿಧಾನಸಭೆಯಲ್ಲಿ ಪಾಲ್ಗೊಳ್ಳದ ಸ್ಥಿತಿಯಲ್ಲಿ ಇದ್ದಾರೆ.

ಸೈಲ್ ಅವರ ಮನೆ ಮೇಲೆ ದಾಳಿ ನಡೆದಿರುವುದು ಹೊಸ ಪ್ರಕರಣವಲ್ಲ. ಅದಿರು ಅಕ್ರಮ ಸಾಗಾಟಕ್ಕೆ ಪ್ರಕರಣದ ಭಾಗವಾಗಿಯೇ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಡಿ ದಾಳಿ ನಡೆದಿರುವುದು ಶೋಧ ಕಾರ್ಯ ಮಾಡಲು ಅಷ್ಟೇ. ಇದು ಹೊಸ ಅಪರಾಧ ಪ್ರಕರಣ ಅಲ್ಲದೇ ಇರುವುದರಿಂದ ಈ ದಾಳಿಯಿಂದ ಅವರ ಶಾಸಕ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.  ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೊಟ್ಟಿರುವ ತೀರ್ಪು ಅವರ ಶಾಸಕ ಸ್ಥಾನ ನಿರ್ಧರಿಸುತ್ತದೆ ಹೊರತು ಈಗ ನಡೆದಿರುವ ಇಡಿ ದಾಳಿಯಿಂದ ಅಲ್ಲ. ಇದು ಸಾಮಾನ್ಯ ಪ್ರಕ್ರಿಯೆ ಆಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಸೈಲ್‌ ಅವರ ಪ್ರಕರಣವು ಒಂದೆಡೆ ರಾಜಕೀಯ ಪ್ರೇರಿತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದ್ದರೆ, ಇನ್ನೊಂದು ಕಡೆ ಇದು ಕಾನೂನುಬದ್ಧ ತನಿಖೆಯ ಭಾಗವೆಂಬ ಧ್ವನಿಯೂ ಇದೆ. ರಾಜಕೀಯದಲ್ಲಿ ವಿರೋಧಿಗಳನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳ ಬಳಕೆ ಆಗುತ್ತಿರುವ ಉದಾಹರಣೆಗಳು ಇತಿಹಾಸದಲ್ಲಿ ಕಂಡುಬಂದಿವೆ ಎಂಬುದು ಒಂದು ವಾಸ್ತವ. ಆದರೆ, ಅದೇ ವೇಳೆ ಯಾರ ಮೇಲಾದರೂ ಗಂಭೀರ ಆರೋಪಗಳು ಇದ್ದರೆ, ನ್ಯಾಯಾಂಗ ತನಿಖೆಯು ನಡೆದು ಸತ್ಯವನ್ನು ಹೊರತರುವುದು ಅವಶ್ಯಕ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು

ಸೈಲ್ ಅವರ ರಾಜಕೀಯ ಭವಿಷ್ಯ ಮತ್ತು ಶಾಸಕ ಸ್ಥಾನ ಭದ್ರತೆ ಕಾನೂನು ತೀರ್ಪುಗಳ ಮೇಲೆ ನಿರ್ಧಾರವಾಗಲಿದೆ. ಇಡಿ ದಾಳಿಯು ಹೊಸ ಅಪರಾಧ ಪ್ರಕ್ರಿಯೆಯ ಭಾಗವಲ್ಲ ದಿದ್ದರೂ, ಅದರ ಪರಿಣಾಮಗಳು ರಾಜಕೀಯ ಮತ್ತು ಸಾರ್ವಜನಿಕ ಮನೋಭಾವನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಬೆಳವಣಿಗೆಗೆ ಎಲ್ಲೆಡೆ ಗಮನ ಹರಿಸಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ, ನ್ಯಾಯಾಲಯ ಏನು ತೀರ್ಪು ನೀಡುತ್ತದೆ, ಮತ್ತು ಇದಕ್ಕೆ ರಾಜಕೀಯವಾಗಿ ಹೇಗೆ ಪ್ರತಿಕ್ರಿಯೆ ಲಭಿಸುತ್ತದೆ ಎಂಬುದನ್ನು ಸೂಕ್ಷ್ಮ ಕಣ್ಣಿನಿಂದ ಗಮನಿಸುವುದು ಅಗತ್ಯ. ಸತ್ಯ ಬಹಿರಂಗವಾಗುವುದು, ನ್ಯಾಯ ಸಂಪನ್ನವಾಗುವುದು ಮತ್ತು ರಾಜಕೀಯ ಶುದ್ಧತೆ ಉಳಿಯುವುದು ಇಂತಹ ಸಂದರ್ಭಗಳಲ್ಲಿ ಬಹುಮುಖ್ಯ.

3d4cecf9531af4a1bc82eaede91c5ddc?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಮನಗರ | ಬೀಡಿ ಕಾರ್ಮಿಕರಿಗೆ ಸಿಗದ ಮೂಲ ಸೌಲಭ್ಯ: ಹಕ್ಕುಗಳ ಬಗ್ಗೆ ತಿಳಿಸಿದ ಮುಖಂಡರು

ಬೀಡಿ ಕಾರ್ಮಿಕರಿಗೆ ಬೀಡಿ ಕಾರ್ಡ್‌ ದೊರೆಯದಿರುವುದರಿಂದ ಇಎಸ್‌ಐ, ಪಿಎಫ್‌ ಹಾಗೂ ಯಾವುದೇ...

ಕಲಬುರಗಿ | 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ...

ಗುಬ್ಬಿ | ಸ್ಪ್ರೇ ಮಾಡಿ ಬೈಕ್ ಸವಾರನ ಪ್ರಜ್ಞೆ ತಪ್ಪಿಸಿ ಚಿನ್ನದ ಸರ ಕದ್ದೊಯ್ದ ಖದೀಮರು

ಯುವತಿಯೊಬ್ಬಳು ರಸ್ತೆಯಲ್ಲಿ ನಿಂತು ಬೈಕ್ ನಲ್ಲಿ ಬರುವವರನ್ನು ಟಾರ್ಗೆಟ್ ಮಾಡಿ...

ಗುಬ್ಬಿ | ಧಾರ್ಮಿಕ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾದ ಕೊಡಿಯಾಲದ ವೀರೇಶಾರಾಧ್ಯ

ಧರ್ಮ, ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ತಾಲ್ಲೂಕಿನ...

Download Eedina App Android / iOS

X